ಹೊಸ ಚಿತ್ರಕ್ಕೆ ಭಾರಿ ಸಂಭಾವನೆ ಪಡೆದ ರಶ್ಮಿಕಾ ಮಂದಣ್ಣ
ಹೈದರಾಬಾದ್, ಅ 28 : ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿರುವ ರಶ್ಮಿಕಾ ಮಂದಣ್ಣ, ಭಾರಿ ಸಂಭಾವನೆಗಾಗಿ ಮತ್ತೆ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೆ ತೆಲುಗಿನಲ್ಲಿ ಹೊಸ ಸಿನಿಮಾ ‘ಆಡಲ್ಲು ಮೀಕು ಜೋಹರ್ಲು’ ಚಿತ್ತ್ರಕ್ಕೆ ರಶ್ಮಿಕಾ ಮಂದಣ್ಣ ಸಹಿ ಮಾಡಿದ್ದು, ಚಿತ್ರ ಅಧಿಕೃತವಾಗಿ ತಿರುಮಲದಲ್ಲಿ ಮುಹೂರ್ತ ಮುಗಿಸಿ ಸೆಟ್ಟೇರಿದೆ. ಈ ಚಿತ್ರಕ್ಕಾಗಿ ರಶ್ಮಿಕಾ ಭಾರಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಸಂಭಾವನೆಯ ಮೊತ್ತ ಇಂತಿಷ್ಟೇ ಎಂಬ ಮಾಹಿತಿ ಹೊರಬಂದಿಲ್ಲವಾದರೂ ತೆಲುಗಿನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನೇ ನೀಡುತ್ತಿರುವ ರಶ್ಮಿಕಾಗೆ ಒಂದು ಕೋಟಿಗೂ ಅಧಿಕ ಸಂಭಾವನೆ ನೀಡಲು ನಿರ್ಮಾಪಕರು ಸಿದ್ಧರಾಗಿದ್ದಾರಂತೆ.
ಈ ಸಿನಿಮಾಗೆ ಮೊದಲು ನಟಿ ಸಾಯಿ ಪಲ್ಲವಿ ನಟಿಸುವುದು ಬಹುತೇಕ ಖಚಿತವಾಗಿತ್ತು. ಆದರೆ ಕೊನೆಕ್ಷಣದಲ್ಲಿ ಆಕೆ ಸಿನಿಮಾದಿಂದ ಹೊರನಡೆದಿದ್ದರಿಂದ ರಶ್ಮಿಕಾ ಮಂದಣ್ಣ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ ಶರ್ವಾನಂದ್ ಗೆ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಬಹುನಿರೀಕ್ಷೆಯ ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಪ್ರಾರಂಭವಾಗಲಿದ್ದು, ವರ್ಷದ ಕೊನೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಕಿಶೋರ್ ತಿರುಮಲ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಶರ್ವಾನಂದ್ ಬಳಿಯೂ ಎರಡೂ ಸಿನಿಮಾಗಳಿವೆ. ಈ ಎಲ್ಲಾ ಸಿನಿಮಾ ಕೆಲಸಗಳು ಪೂರ್ಣಗೊಂಡ ಬಳಿಕ ಹೊಸ ಸಿನಿಮಾದಲ್ಲಿ ಇಬ್ಬರೂ ಬ್ಯುಸಿಯಾಗಲಿದ್ದಾರೆ.