ಕುರುವತ್ತಿ ದೇಗುಲದಲ್ಲಿ ನಟ ದರ್ಶನ ಪೋಟೊಗೆ ಪೂಜೆ: ಇಬ್ಬರು ಅರ್ಚಕರು ಅಮಾನತು
ಹೂವಿನ ಹಡಗಲಿ 14: ತಾಲೂಕಿನ ಕುರುವತ್ತಿ ಗ್ರಾಮದಲ್ಲಿ ಕಳೆದ ಜು.28ರಂದು ಸುಕ್ಷೇತ್ರ ಕುರುವತ್ತಿಯ ಶ್ರೀಬಸವೇಶ್ವರ ದೇವಸ್ಥಾನದಲ್ಲಿ ಅಭಿಮಾನಿಗಳ ಆಶಯದ ಮೇರೆಗೆ ಬಸವಣ್ಣ ಮೂರ್ತಿಯ ಪಾದದಡಿಯಲ್ಲಿ ನಟ ದರ್ಶನ ಪೋಟೊ ಇರಿಸಿ ಪೂಜೆಗೈದಿದ್ದ ಹಿನ್ನೆಲೆಯಲ್ಲಿ ಭಾನುವಾರ ದೇವಸ್ಥಾನದ ಆಡಳಿತ ಮಂಡಳಿ ಬಸಪ್ಪ ಪೂಜಾರ ಹಾಗೂ ರೇಖಾ ಲೋಕನಾಥ ಪೂಜಾರ ಎಂಬ ಇಬ್ಬರು ಅರ್ಚಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಅರ್ಚಕ ಬಸಪ್ಪ ಇವರು ದೇವಸ್ಥಾನದ ನಿಯಮಗಳಿಗೆ ಬದ್ಧರಾಗಿರದೆ ಕೊಲೆ ಆರೋಪದಡಿ ಜೈಲು ಸೇರಿರುವ ಆರೋಪಿಯ ಪೋಟೋವನ್ನು ದೇವಾಲಯದ ಒಳಗಡೆ ಇರಿಸಿ ಪೂಜೆಗೈಯುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಗೂ ಸರದಿಯ ಪ್ರಕಾರ ರೇಖಾ ಲೋಕನಾಥ ಪೂಜಾರ ಇವರು ನಿತ್ಯ ಪೂಜೆ ಮಾಡಬೇಕಿತ್ತು. ಆದರೆ ತಮ್ಮ ಸೇವಾ ಅವಧಿಯಲ್ಲಿ ಬಸಪ್ಪ ಪೂಜಾರ ಇವರಿಗೆ ಸೇವೆ ವಹಿಸಿ ಕರ್ತವ್ಯಲೋಪ ಮಾಡಿರುವುದರ ಜೊತೆಗೆ ಅರ್ಚಕ ಬಸಪ್ಪ ಪೂಜಾರ ಇವರು ಮಾಡಿರುವ ತಪ್ಪಿನಲ್ಲಿ ಇವರು ಕೂಡಾ ಪರೋಕ್ಷವಾಗಿ ಭಾಗಿಯಾಗಿರುವುದರಿಂದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಹೆಚ್.ಗಂಗಾಧರ ಇವರ ಮಾರ್ಗದರ್ಶನದಂತೆ ಶನಿವಾರ ಕಾರ್ಯನಿರ್ವಾಹಣಾಧಿಕಾರಿ ಶಾಂತ ಪಟ್ಟಣಶೆಟ್ಟಿ ಇವರು ಇಬ್ಬರು ಅರ್ಚಕರನ್ನು ಅಮಾನತುಗೊಳಿಸಿದ್ದಾರೆ.