ಹಾವೇರಿ

ಬೇಡ್ತ-ವರದಾ ನದಿ ಜೋಡಣೆಗೆ ಜನಾಂದೋಲನ ಅಗತ್ಯ: ರವಿಕಾಂತ ಅಂಗಡಿ

ಬೇಡ್ತ-ವರದಾ ನದಿ ಜೋಡಣೆಗೆ ಜನಾಂದೋಲನ ಅಗತ್ಯ: ರವಿಕಾಂತ ಅಂಗಡಿ


          ಹಾವೇರಿ 06: ಬೇಡ್ತ-ವರದಾ ನದಿ ಜೋಡಣೆ ಯೋಜನೆ ಸಾಕಾರಗೊಳ್ಳಲು ಎಲ್ಲ ಸಂಘಟನೆಗಳ ವಿಶ್ವಾಸ ಪಡೆದು ಜನಸಾಮಾನ್ಯರ ಆಂದೋಲನ ರೂಪಿಸಬೇಕಾಗಿದೆ ಎಂದು ವಕೀಲರು ಹಾಗೂ ಉತ್ತರ ಕರ್ನಾಟಕ ಮಹಾಸಭಾದ ರವಿಕಾಂತ ಅಂಗಡಿ ಹೇಳಿದರು. ನಗರದ ಹುಕ್ಕೇರಿಮಠದ ಆವರಣದಲ್ಲಿ  ನದಿ ಜೋಡಣೆ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

         ಗದಗ ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ ಹಾಗೂ ಗದಗ ಸೇರಿದಂತೆ ಜಿಲ್ಲೆಯ ಸಮಗ್ರ ನೀರಾವರಿ ಯೋಜನೆ ರೂಪಿಸಲು ಉಗ್ರ ಹೋರಾಟ ನಡೆಸಬೇಕಿದೆ. ಪ್ರಸ್ತುತ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಿ, ಅಗತ್ಯಬಿದ್ದಾಗ ಹೋರಾಟ ಮಾಡುತ್ತೇವೆ. ಆದರೆ, ಈ ಸಭೆ ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸುವ ಮಹತ್ವದ ಸಭೆಯಾಗಿದೆ. ನದಿ ಜೋಡಣೆ ಯೋಜನೆ ಸುಲಭವಾಗಿ ಸಾಕಾರಗೊಳ್ಳುವಂಥದ್ದಲ್ಲ. ಇದಕ್ಕಾಗಿ ಸುದೀರ್ಘ ಹೋರಾಟ ನಡೆಸಬೇಕಾಗುತ್ತದೆ.

           ಯಾವುದೇ ಯೋಜನೆ ಅನುಷ್ಠಾನಗೊಳ್ಳುವ ಮೊದಲು ಹಲವು ಹಂತಗಳ ಪರೀಶೀಲನೆಗೆ ಒಳಪಡುತ್ತದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕು ಎಂದರು. ಸಭೆಯಲ್ಲಿ ಬಾಲೇಹೊಸೂರ-ಶಿರಹಟ್ಟಿಯ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಹಾವೇರಿ ಹುಕ್ಕೇರಿಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ಬಾಳೂರಿನ ಅಡವಿಸ್ವಾಮಿಮಠದ ಶ್ರೀ ಕುಮಾರ ಮಹಾಸ್ವಾಮಿಗಳು, ನೆಗಳೂರಿನ ಶ್ರೀ ಗುರುಶಾಂತೇಶ್ವರ ಮಹಾಸ್ವಾಮಿಗಳು, ನಾಗವಂದದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಹಾವೇರಿಯ ಹೊಸಮಠದ ಶ್ರೀ ಬಸವ ಶಾಂತಲಿಂಗ ಮಹಾಸ್ವಾಮಿಗಳು,

            ಅಗಡಿಯ ಅಕ್ಕಿಮಠದ ಶ್ರೀ ಗುರುಲಿಂಗ ಮಹಾಸ್ವಾಮಿಗಳು ಹಾಗೂ ಕೂಡಲದ ಗುರು ನಂಜೇಶ್ವರ ಮಠದ ಶ್ರೀ ಗುರು ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಮಾಜಿ ಶಾಸಕರಾದ ಶಿವರಾಜ ಸಜ್ಜನ, ವೀರಭದ್ರ​‍್ಪ ಬಳ್ಳಾರಿ, ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ವಕೀಲ ಸಂದೀಪ ಪಾಟೀಲ, ರವಿಕಾಂತ ಅಂಗಡಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. 


ಸುದ್ದಿ ಓದಿ