ಧಾರವಾಡದಲ್ಲಿ ಪಂ. ಪಂಚಾಕ್ಷರ ಗವಾಯಿಗಳ ಸ್ಮಾರಕ ನಿರ್ಮಾಣವಾಬೇಕು: ವೇ.ಚನ್ನವೀರಸ್ವಾಮಿ
ಧಾರವಾಡ16: ಉತ್ತರದ ಸಂಗೀತವನ್ನು ದಕ್ಷಿಣಕ್ಕೆ ತಂದ ಪ್ರಮುಖರಲ್ಲೊಬ್ಬರಾದ, ಶಿಷ್ಯ ಪರಂಪರೆಯ ಮೂಲಕ ಧಾರವಾಡಕ್ಕೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ತವರು ಎನ್ನುವ ಖ್ಯಾತಿ ತಂದು ಕೊಟ್ಟ, ವಚನಗಳಿಗೆ ರಾಗ ಸಂಯೋಜಿಸಿ ಹಾಡಿ, ವಚನ ಗಾಯನ ಪರಂಪರೆಗೆ ನಾಂದಿ ಹಾಡಿದ್ದಲ್ಲದೇ ಭಾರತ ರತ್ನ ಪಂ. ಭೀಮಸೇನ ಜೋಷಿಯವರಂತಹ ಮಹಾನ್ ಸಂಗೀತ ದಿಗ್ಗಜರನ್ನು ಕೊಡುಗೆಯಾಗಿ ನೀಡಿದ ಶ್ರೇಯಸ್ಸು ಗಾನಯೋಗಿ ಪಂಚಾಕ್ಷರ ಗವಾಯಿಗಳವರಿಗೆ ಸಲ್ಲುತ್ತದೆ. ಇಂತಹ ಮಹಾನ್ ವಿಭೂತಿ ಪುರುಷ್ ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳವರ ಸ್ಮಾರಕ ಧಾರವಾಡದಲ್ಲಿ ಆಗಬೇಕು ಎಂದು, ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕರಾದ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಹೇಳಿದರು.
ಧಾರವಾಡ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ, ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಜು.14 2024 ರಂದು ಆಯೋಜಿಸಿದ್ದ ಗಾನಯೋಗಿ ಪಂ. ಪಂಚಾಕ್ಷರ ಗವಾಯಿಗಳವರ 80ನೇ ಪುಣ್ಯಸ್ಮರಣೆ ‘ಗುರು ಗುಣಗಾನ’ ಕವಿಗೋಷ್ಠಿ, ಕಾವ್ಯಗಾಯನ ಮತ್ತು ನೃತ್ಯ ನಮನವನ್ನು ಒಳಗೊಂಡ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಸಂಸ್ಕೃತಿ ಶಿಶುಮಂದಿರದ ಅಧ್ಯಕ್ಷೆ ಮೃಣಾಲ ಜೋಶಿ ಮಾತನಾಡುತ್ತ, ಗುರು ಪಂಚಾಕ್ಷರಿ ಗವಾಯಿಗಳವರ ಜೀವನ ಸಾಧನೆ ಸಂದೇಶವನ್ನು ವಿವರಿಸುತ್ತ ಪೂಜ್ಯರ ಕನ್ನಡಾಭಿಮಾನ, ಸ್ವದೇಶಿ ಅಭಿಮಾನ ಕುರಿತು ತಿಳಿಸಿದ್ದಲ್ಲದೆ ಅವರ ಆರೋಗ್ಯದಲ್ಲಿ ಏರುಪೇರಾದಾಗ ದೇಶಿ ಓಷಧಿಯನ್ನೇ ಸ್ವೀಕರಿಸಿದರು. ಅವರು ಕೇವಲ 52 ವರ್ಷ ಬದುಕಿದ್ದರೂ ಅಸಾಮಾನ್ಯ ಸಾಧನೆ ಮಾಡಿದ ಪೂಜ್ಯ ಪಂಚಾಕ್ಷರ ಗವಾಯಿಗಳ ತತ್ವ ಆಚರಣೆ ಅಳವಡಿಸಿಕೊಳ್ಳುವ ಮೂಲಕ ನಾವು ಪಂಚಾಕ್ಷರ ಗವಾಯಿಗಳನ್ನು ಮನೆ ಮನೆಗೆ ಕರೆದೊಯ್ಯಬೇಕು ಎಂದು ಹೇಳಿದರು.
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ಮಾತನಾಡುತ್ತ ವಿಶ್ವದಲ್ಲಿಯೇ ಬಹುದೊಡ್ಡ ಗುರುಪರಂಪರೆ ಹೊಂದಿದ ಕೀರ್ತಿ ಪಂ.ಪಂಚಾಕ್ಷರ ಗವಾಯಿಗಳಿಗೆ ಸಲ್ಲುತ್ತದೆ. ದೇಶದೆಲ್ಲೆಡೆಯಲ್ಲಿ ಅಸಂಖ್ಯೆಯಲ್ಲಿರುವ ಅವರ ಶಿಷ್ಯವರ್ಗ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದು ನಾಡಿಗೆ ಕೀರ್ತಿ ತಂದಿದ್ದಾರೆ ಎಂದರು.
ಕವಿವಿ ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಸಹಾಯಕ ಉಪನ್ಯಾಸಕರಾದ, ಡಾ.ಎ.ಎಲ್ ದೇಸಾಯಿ ಮಾತನಾಡುತ್ತ ಪಂ.ಪಂಚಾಕ್ಷರ ಗುರುಗಳ ಹೆಸರು ಉಳಿಸುವ ನಿಟ್ಟಿನಲ್ಲಿ, ಕಂಚಿನ ಪ್ರತಿಮೆ ಸ್ಥಾಪನೆ ಮತ್ತು ಧಾರವಾಡದಲ್ಲಿ ಮಾದರಿಯ ಆಶ್ರಮ ಸ್ಥಾಪಿಸಲು ಪ್ರಯತ್ನಿಸೋಣ ಎಂದರು.
ಡಾ. ಸುಮಾ ಬಸವರಾಜ ಹಡಪದ, ದೇವಿಕಾ ಜೋಗಿ ಹೊಸಪೇಟೆ, ಡಾ. ಸುರೇಶ ಕಳಸಣ್ಣವರ ವೇದಿಕೆಯಲ್ಲಿ ಇದ್ದರು.
ಧಾರವಾಡದ ಶ್ರೀಗುರು ಪುಟ್ಟರಾಜ ಸಂಗೀತ ಶಾಲೆ, ವೀರಶೈವ ಜಾಗೃತಿ ಮಹಿಳಾ ಸಮಿತಿ ಸದಸ್ಯರು ಸಂಗೀತ ನಮನ ಸಲ್ಲಿಸಿದರು. ‘ಮಾಸ್ಟರ್’ ಸಾತ್ವಿಕ್ ಜಿ. ಮಹಾಮನೆ ವಯೋಲಿನ್ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಸುರೇಶ ನಿಡಗುಂದಿ, ಸದಾನಂದ ತಾವಡೆ ಹಾರ್ಮೊನಿಯಂದಲ್ಲಿ ಡಾ.ಸುಮಾ ಹಡಪದ ಸಾಥ್ ಸಂಗತ ನೀಡಿದರು. ಹುಬ್ಬಳಿಯ ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್, ಧಾರವಾಡದ ಉಪಾಧ್ಯೆ ನೃತ್ಯ ವಿಹಾರ, ತಾಳಿಕೊಟೆಯ ಶ್ರೀ ವಿರಕ್ತೇಶ್ವರ ಭರತನಾಟ್ಯ ತರಬೇತಿ ಸಂಸ್ಥೆ, ಮುಂಡರಗಿಯ ನಾಟ್ಯಬಿಂದು ಡ್ಯಾನ್ಸ್ ಅಕಾಡೆಮಿ, ಸಂಸ್ಥೆಯ ಶಿಷ್ಯರು ನೃತ್ಯ ನಮನ ಸಲ್ಲಿಸಿದರು.
ಡಾ. ಸುರೇಶ ಕಳಸಣ್ಣವರ ಕಲಘಟಗಿ ಇವರ ಅಧ್ಯಕ್ಷತೆಯಲ್ಲಿ, ಪಂಚಾಕ್ಷರ ಗವಾಯಿಗಳವರ ಕುರಿತು ಬರೆದ ಕವಿತೆಗಳ ಕವಿಗೋಷ್ಠಿಯಲ್ಲಿ ಮೃತ್ಯುಂಜಯ ಹಿರೇಮಠ, ಪ್ರೊ. ಜಯಶ್ರೀ ಹಿರೇಮಠ, ಪದ್ಮಾ ಜೆ. ಕಬಾಡಿ, ವೀರಯ್ಯ ಸಂಕಿನಮಠ, ಬಸವರಾಜ ಹಡಪದ, ವಿಮಲಾ ಹುಬ್ಬಳ್ಳಿ, ಸಂಧ್ಯಾ ದೀಕ್ಷಿತ, ಸುಲೋಚನ ಮಾಲಿಪಾಟೀಲ, ರೇಖಾ ಜೋಶಿ, ವೀರೇಶರಡ್ಡಿ ಟಿ. ಕಾಮರಡ್ಡಿ, ದಾನಮ್ಮ ವೀ ಅಂಗಡಿ, ಮಧುಮತಿ ಸಣಕಲ್, ಸೀತಾ ಛಪ್ಪರ, ಶಾರದಾ ಕೆಲಸಂಗದ, ಶಾಂತಕ್ಕ ಹೊಂಬಳ, ಇಂದಿರಾ ಮೋಟೆಬೆನ್ನೂರ ಅವರು ಸ್ವರಚಿತ ಕವನದ ಮೂಲಕ ಗುರು ಗುಣಗಾನ ಮಾಡಿದರು.
ಶಶಿಕಲಾ ಅಕ್ಕಿ ಹಾವೇರಿ ಇವರು ಸ್ವಾಗತಿಸಿದರು. ಸುಧಾ ಕಬ್ಬೂರ ನಿರೂಪಿಸಿದರು. ಡಾ.ಸುಮಾ ಹಡಪದ ವಂದಸಿದರು.