ಧಾರವಾಡ - ಹುಬ್ಬಳ್ಳಿ

ಗಾದೆಗಳು ವೇದಗಳಿಗೆ ಸಮಾನ: ಶಂಕರ ಹಲಗತ್ತಿ

ಗಾದೆಗಳು ವೇದಗಳಿಗೆ ಸಮಾನ: ಶಂಕರ ಹಲಗತ್ತಿ

ಲೋಕದರ್ಶನ ವರದಿ 

          ಧಾರವಾಡ 13: ಗಾದೆಗಳು ವೇದಗಳಿಗೆ ಸಮ. ಅವು ನಮ್ಮ ಹಿರಿಯರ ಅನುಭವಗಳ ನುಡಿ ಮುತ್ತುಗಳಿದ್ದಂತೆ. ನಮ್ಮ ಬದುಕನ್ನು ತಿದ್ದಿ ಸಂಸ್ಕಾರಗೊಳಿಸುವ ಶಕ್ತಿ ಅವುಗಳಲ್ಲಿದೆ ಎಂದು ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಆನಂದ ಚಿಗಟೇರಿ ದತ್ತಿ ಅಂಗವಾಗಿ, ದಿ: 12-11-2026 ರಂದು ಆಯೋಜಿಸಿದ್ದ ‘ಕನ್ನಡ ಗಾದೆ ಮಾತುಗಳ ಆಧರಿಸಿ ಕಥೆ ಹೇಳುವ ಸ್ಪರ್ಧೆ’ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಸಿ ಮಾತನಾಡಿದರು.       

        ಕ.ವಿ.ವ. ಸಂಘದಲ್ಲಿ ಚಿಗಟೇರಿ ಸಹೋದರಿಯರು ತಮ್ಮ ಸಹೋದರ ದಿ. ಆನಂದ ಚಿಗಟೇರಿ ಸ್ಮರಣಾರ್ಥ ದತ್ತಿ ಇರಿಸಿ ಪ್ರತಿ ವರ್ಷ ಕನ್ನಡ ಗಾದೆ ಆಧರಿಸಿ ಕಥೆ ಹೇಳುವ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ದಿ. ಆನಂದ ಚಿಗಟೇರಿ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಕಥೆಗಳಲ್ಲಿ ನೈತಿಕತೆ ಇದೆ. ಸಮಾಜ ಪರಿವರ್ತನೆಯಲ್ಲಿ ಕಥೆಗಳ ಪಾತ್ರ ಹಿರಿದಾಗಿದೆ. ಇಂತಹ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ ಬಹುಮಾನ ಮುಖ್ಯವಲ್ಲ ಎಂದರು. 

ಕ.ವಿ.ವ.ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ವೀರಣ್ಣ ಒಡ್ಡೀನ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾದೆ ಮಾತುಗಳು ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುವಲ್ಲಿ ಸಹಕಾರಿಗಳಾಗಿವೆ. ಮಕ್ಕಳಿಗಂತೂ ಕಥೆಗಳೆಂದರೆ ಬಹಳ ಇಷ್ಟ. ಮಕ್ಕಳ ಕಲ್ಪನಾ ಶಕ್ತಿ ವೃದ್ಧಿಸಿ ಅವರಲ್ಲಿ ಏಕಾಗ್ರತೆ ಕುತೂಹಲ ಮೂಡಿಸುವ ಶಕ್ತಿ ಅವುಗಳಲ್ಲಿದೆ. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಸಮಯದ ಕೊರತೆಯಿಂದ ಕಥೆ ಹೇಳುವವರು ಹಾಗೂ ಕೇಳುವವರೂ ಇಲ್ಲದಿರುವುದು ವಿಪರ್ಯಾಸ. ಮಹಿಳೆಯರು ತಮ್ಮ ಮಕ್ಕಳಿಗೆ ಪಂಚತಂತ್ರದಂತಹ ನೀತಿ ಕಥೆ ಹೇಳಿ, ಅವರ ವ್ಯಕ್ತಿತ್ವ ನಿರ್ಮಾಣ ಮಾಡಬೇಕೆಂದರು.

            ವಿಶ್ರಾಂತ ಪ್ರಾಚಾರ್ಯೆ ಬೆಳಗಾವಿಯ ಡಾ. ಜಯಮಂಗಲಾ ಕರದೇಸಾಯಿ, ವಿಶ್ರಾಂತ ಪ್ರಾಧ್ಯಾಪಕಿ ಡಾ. ರಾಜೇಶ್ವರಿ ಕೆಂಚಪ್ಪನವರ ನಿರ್ಣಾಯಕರಾಗಿ ಪ್ರತಿಕ್ರಿಯಿಸಿದರು.  ಕಥಾ ಸ್ಪರ್ಧೆಯಲ್ಲಿ ಹೇಮಾ ಘೋಡಖಿಂಡಿ ಪ್ರಥಮ, ಮಂಜುಳಾ ಚೌಗಲೆ ದ್ವಿತೀಯ, ನೀಲಾ ಶಿಗ್ಲಿ ತೃತೀಯ ಹಾಗೂ ಜಯಶ್ರೀ ಭಟ್ ಮತ್ತು ಅರುಣಾ ಶಾನಭಾಗ ಸಮಾಧಾನಕರ ಬಹುಮಾನ ಪಡೆದರು. ಇವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.  ಡಾ. ಜಿನದತ್ತ ಹಡಗಲಿ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸತೀಶ ತುರಮರಿ, ಶಂಕರ ಕುಂಬಿ, ವಿಶ್ವೇಶ್ವರಿ ಹಿರೇಮಠ, ಸುರೇಶ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು. 


ಸುದ್ದಿ ಓದಿ