ಧಾರವಾಡ - ಹುಬ್ಬಳ್ಳಿ

ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಾಸ ಮತ್ತು ಮೌಲ್ಯಶಿಕ್ಷಣ ಕುರಿತು ವಿಶೇಷ ಉಪನ್ಯಾಸ

ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಾಸ ಮತ್ತು ಮೌಲ್ಯಶಿಕ್ಷಣ ಕುರಿತು ವಿಶೇಷ ಉಪನ್ಯಾಸ

ಲೋಕದರ್ಶನ ವರದಿ 

            ಧಾರವಾಡ 14: ಜೆ.ಎಸ್‌.ಎಸ್‌. ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಹಾಗೂ ಜನ್ಮದಿನದ ಸುಸಂದರ್ಭದಲ್ಲಿ, ಜೆ.ಎಸ್‌.ಎಸ್‌. ಆರ್ಥಿಕ ಸಂಶೋಧನಾ ಸಂಸ್ಥೆ ಹಾಗೂ ಜನಸಂಖ್ಯಾ ಸಂಶೋಧನಾ ಕೇಂದ್ರದ ವತಿಯಿಂದ ಜೆ.ಎಸ್‌.ಎಸ್‌. ಶ್ರೀ ಮಂಜುನಾಥೇಶ್ವರ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗಾಗಿ “ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಾಸ ಮತ್ತು ಮೌಲ್ಯಶಿಕ್ಷಣ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

                ಅಖಿಲ ಭಾರತ ಆಕಾಶವಾಣಿಯ ಎ-ಗ್ರೇಡ್ ನಾಟಕ ಕಲಾವಿದರಾದ ಡಾ. ಶಶಿಧರ ನರೇಂದ್ರ ಅವರು ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ತಮ್ಮ ಉಪನ್ಯಾಸದಲ್ಲಿ ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ವಿಕಾಸಕ್ಕೆ ಸತ್ಯ, ಒಗ್ಗಟ್ಟು, ಸಕಾರಾತ್ಮಕ ಚಿಂತನೆ ಹಾಗೂ ಹಿರಿಯರನ್ನು ಗೌರವಿಸುವಂತಹ ಮೌಲ್ಯಗಳು ಅತ್ಯಂತ ಮಹತ್ವದ್ದಾಗಿವೆ ಎಂದು ತಿಳಿಸಿದರು. ಈ ಮೌಲ್ಯಗಳು ಮಕ್ಕಳ ಭವಿಷ್ಯದ ಬೆಳವಣಿಗೆಗೆ ಭದ್ರ ಬುನಾದಿಯಾಗಿವೆ ಎಂದು ಅಭಿಪ್ರಾಯಪಟ್ಟರು. 

                   ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಮಹತ್ವವನ್ನು ಪೌರಾಣಿಕ ಕಥೆಗಳ ಮೂಲಕ ಅತ್ಯಂತ ಸ್ವಾರಸ್ಯಕರವಾಗಿ ವಿವರಿಸಿದರು. ವಿಶೇಷವಾಗಿ, “ಹರ ಮುನಿದರೆ ಗುರು ಕಾಯುವನು, ಗುರು ಮುನಿದರೆ ಯಾರೂ ಕಾಯಲಾರರು” ಎಂಬ ನಾಣ್ಣುಡಿಯ ಮೂಲಕ ಗುರುಗಳು ಹಾಗೂ ಹಿರಿಯರಿಗೆ ಗೌರವ ನೀಡುವ ಮಹತ್ವವನ್ನು ಮನಮುಟ್ಟುವಂತೆ ತಿಳಿಸಿದರು. ಜೀವನದಲ್ಲಿ ಮನುಷ್ಯ ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಅಹಂಕಾರಕ್ಕೆ ಒಳಗಾಗದೆ, ವಿನಯ ಮತ್ತು ನಿರಹಂಕಾರದಿಂದ ಬದುಕಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

             ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಎಸ್‌.ಎಸ್‌. ಆರ್ಥಿಕ ಸಂಶೋಧನಾ ಸಂಸ್ಥೆ ಹಾಗೂ ಜನಸಂಖ್ಯಾ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಜ್ಯೋತಿ ಎಸ್‌. ಹಳ್ಳದ ಅವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೇವಲ ಶೈಕ್ಷಣಿಕ ಸಾಧನೆಯಷ್ಟೇ ಸಾಲದು; ಅದರೊಂದಿಗೆ ನಿರಂತರ ವ್ಯಾಯಾಮ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು, ಪ್ರಸ್ತುತ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಮತ್ತು ಪರಿಸರದೊಂದಿಗೆ ಬೆರೆಯುವುದು ಕೂಡ ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಪೂರಕವಾಗುತ್ತವೆ ಎಂದು ಅಭಿಪ್ರಾಯಪಟ್ಟರು. 


ಸುದ್ದಿ ಓದಿ