ಯರಗಟ್ಟಿ ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ಗೋಕಾಕ 05: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಹಟ್ಟಿ, ಮಾಲದಿನ್ನಿ, ಬೆಣಚಿನಮರ್ಡಿ ಗ್ರಾಮದ ರಮೇಶ ಅವರ ಅಭಿಮಾನಿಗಳು ಯರಗಟ್ಟಿ ಸಂಕೇಶ್ವರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಶುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ರಸ್ತೆ ತಡೆ ನಡೆಸಿ, ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ ಅಭಿಮಾನಿಗಳು, ದಿನೇಶ್ ಕಲ್ಲಹಳ್ಳಿ ಹಾಗೂ ತಂಡದವರು ನಕಲಿ ಸಿಡಿ ತಯಾರಿಸಿ ರಮೇಶ್ ಜಾರಕಿಹೊಳಿ ಅವರ ತೆಜೋವಧೆ ಮಾಡಲಾಗಿದೆ. ರಮೇಶ್ ಜಾರಕಿಹೊಳಿ ಅವರ ವಿರುದ್ಧ ಪಿತೂರಿ ಮಾಡಿದ್ದಾರೆ. ಅಲ್ಲದೇ ಇದರ ಹಿಂದೆ ದೊಡ್ಡ ಜಾಲವೇ ಇದ್ದು ಇವರನ್ನು ಬಂಧಿಸಿ ತನಿಖೆ ನಡೆಸಲು ಆಗ್ರಹಿಸಿದರು.
ಕಳೆದ ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗುತ್ತಿದ್ದು, ಪೋಲಿಸ್ ಇಲಾಖೆ ಸರಿಯಾದ ಕ್ರಮಕೈಗೊಂಡಿಲ್ಲ ಅಲ್ಲದೇ ತನಿಖೆ ವಿಳಂಬವಾಗುತ್ತಿದೆ. ರಾಜ್ಯ ಸರಕಾರ ಈ ಪ್ರಕರಣವನ್ನು ಸಿಬಿಐ ಅಥವಾ ಸಿಓಡಿಗೆ ವಹಿಸಿ ತನಿಖೆ ಮತ್ತಷ್ಟು ಚುರುಕುಗೊಳಿಸಬೇಕು. ದಿನೇಶ ಕಲ್ಲಹಳ್ಳಿಗೆ ಪೋಲಿಸರು ನೋಟಿಸ್ ನೀಡಿದ್ದರೂ. ತನಿಖೆಗೆ ಸಹರಿಸುತ್ತಿಲ್ಲ ಈ ಕೂಡಲೇ ಅವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಆತ್ಮಹತ್ಯೆಗೆ ಯತ್ನ: ಟೈರಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸುತ್ತಿದ್ದ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಅಭಿಮಾನಿಗಳಾದ ಕಲ್ಲಪ್ಪ ಕಿಚಡಿ, ಲಕ್ಕಪ್ಪ ಕಡಕೋಳ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಯತ್ನ ನಡೆಸಿದರು. ಸ್ಥಳದಲಿದ್ದ ಪೋಲಿಸರು ಆತ್ಮಹತ್ಯೆ ಯತ್ನಿಸಿದ ಯುವಕರನ್ನು ತಡೆದರು, ಅಸ್ವಸ್ಥಗೊಂಡ ಯುವಕರನ್ನು ಪೋಲಿಸರು ಅಂಬ್ಯೂಲೆನ್ಸ್ ಮುಖಾಂತರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಹನುಮಂತ ದುರ್ಗನ್ನವರ, ಸುರೇಶ ಸನದಿ, ಲಕ್ಕಪ್ಪ ಮಾಳಗಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.