ವಚನಾನಂದ ಸ್ವಾಮಿ ಹೇಳಿಕೆ ಖಂಡಿಸಿ ಉಗ್ರ ಪ್ರತಿಭಟನೆ
ಅಥಣಿ 24: ಇತ್ತೀಚಿಗೆ ವಚನಾನಂದ ಸ್ವಾಮಿ ಜಂಗಮರ ಕುರಿತ ಹೇಳಿಕೆಯನ್ನು ಖಂಡಿಸಿ ಅಥಣಿ ತಾಲೂಕಿನ ಸಮಸ್ತ ಜಂಗಮ ಸಮಾಜದವರು ನಗರದ ಡಿ.ಬಿ.ಪವಾರದೇಸಾಯಿ ವೃತ್ತದಲ್ಲಿ ಮಂಗಳವಾರ ಉಗ್ರ ಪ್ರತಿಭಟನೆಯನ್ನು ಮಾಡಿ ಸ್ವಾಮಿ ವಚನಾನಂದರ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಂತರ ತಾಲೂಕಾ ಜಂಗಮ ಸಮಾಜ ಅಧ್ಯಕ್ಷ ಪಂಚಾಕ್ಷರಿ ಅಳ್ಳಿಮಠ, ಯುವ ಘಟಕದ ಅಧ್ಯಕ್ಷ ಪುಟ್ಟು ಹಿರೇಮಠ ಜಂಟಿಯಾಗಿ ಮಾತನಾಡಿ ಇತ್ತೀಚಿಗೆ ವಚನಾನಂದರು ಮಾಧ್ಯಮಗಳಲ್ಲಿ ಜಂಗಮ ಸಮಾಜದ ಕುರಿತು ಕೆಲವು ಅವಹೇಳನಕಾರಿ ಶಬ್ದಗಳನ್ನು ಬಳಿಸಿ ಮಾತನಾಡಿದ್ದು ಇಡಿ ಸಮಾಜಕ್ಕೆ ತ್ರೀವ ನೋವನುಂಟು ಮಾಡಿರುತ್ತದೆ. ವಚನಾನಂದರು ಭಿನ್ನಾ ತೀರಿಸೋ ಸ್ವಾಮಿಗಳ ಬಗ್ಗೆ ಏನು ಮಾತನಾಡುವದು? ದಕ್ಷಿಣೆ ಕೇಳೋ ಸ್ವಾಮಿಗಳ ಬಗ್ಗೆ ಏನೂ ಮಾತನಾಡೋದು? ಊಟಕ್ಕಿಲ್ಲದ ಸ್ವಾಮಿಗಳ ಬಗ್ಗೆ ಏನೂ ಮಾತನಾಡೋದು? ಈ ರೀತಿ ಮಾತನಾಡಿರುವದು ಅವರ ಸ್ಥಾನ ಮಾನಕ್ಕೆ ಶೋಭೆ ತರುವಂತಹದಲ್ಲ. ಈ ಹೇಳಿಕೆಯನ್ನು ತಕ್ಷಣ ಹಿಂದೆ ಪಡೆದು ನಮ್ಮ ಸಮುದಾಯದ ಭಾವನೆಗಳಿಗೆ ಗೌರವ ತರುವ ರೀತಿಯಲ್ಲಿ ಹೇಳಿಕೆಯನ್ನು ನೀಡಬೇಕೆಂದು ಆಗ್ರಹಿಸುವುದಾಗಿ ತಿಳಿಸಿದ್ದಾರೆ. ವಚನಾನಂದರಾದ ನೀವು ವಿದ್ಯಾರ್ಥಿ ಜೀವನದಲ್ಲಿ ಜಂಗಮರ ದಾಸೋಹದಿಂದ ಬಂದ ಪ್ರಸಾದವನ್ನು ಸ್ವೀಕರಿಸಿ ಬೆಳೆದು ದೊಡ್ಡವರಾಗಿದ್ದನ್ನು ಮರೆಯಬಾರದು ಎಂದು ಹೇಳಿದರು.
ಪ್ರತಿಭಟನೆ ಸ್ಥಳಕ್ಕೆ ಅಥಣಿ ತಹಸಿಲ್ದಾರ ದುಂಡಪ್ಪಾ ಕೋಮಾರ, ಡಿ.ವೈ.ಎಸ್.ಪಿ ಎಸ್.ವ್ಹಿ.ಗೀರಿಶ, ಆಗಮಿಸಿದ್ದರು. ಹೋರಾಟಗಾರು ಸಮಾಜ ಪರವಾಗಿ ಇಬ್ಬರಿಗೂ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು. ಮನವಿ ಪತ್ರವನ್ನು ಶರಣಯ್ಯಾ ವಸ್ತ್ರದ ಓದಿದರು.
ಪ್ರತಿಭಟನೆಯಲ್ಲಿ ಜಂಗಮ ಸಮಾಜದ ಅಧ್ಯಕ್ಷ ಪಂಚಾಕ್ಷರಿ ಅಳ್ಳಿಮಠಿ ಉಪಾಧ್ಯಕ್ಷ ರಾಜು ಹಿರೇಮಠ. ಚನ್ನಯ್ಯಾ ಇಟ್ನಾಳಮಠ, ಶರಣಯ್ಯಾ ವಸ್ತ್ರದ, ಜಗದೀಶ ಹೀರೆಮಠ, ಈರಣ್ಣಾ ಜಗದಾಳಮಠ, ಶಿವುಕುಮಾರ ತೆಲಸಂಗ, ನಟರಾಜ ಹಿರೇಮಠ, ಅಶೋಕ ಅಳ್ಳಿಮಟ್ಟಿ. ಎಸ್ ಎಮ್ ಮಠಪತಿ, ನಿವೃತ್ತ ಕ್ರಷಿ ಅಧಿಕಾರಿ ಅಶೋಕ ಅವಟಿಮಠ, ನಿಂಗಯ್ಯಾ ಹಿರೇಮಠ, ಸುರೇಶ ಹಚ್ಚಿಬಟ್ಟ, ಎಸ್ ಜೆ ಸಾಲಿಮಠ, ಆನಂದ ಯಕ್ಕಿಹಳ್ಳಿಮಠ. ಸೋಮಶೇಖರ ಅಂಬಲಿ ಪುಟ್ಟು ಹಿರೇಮಠ, ಮಹೇಷ ಹಿರೇಮಠ, ಮುಂತಾದವರು ಉಪಸ್ಥಿತರಿದ್ದರು.
ಈ ಹೋರಾಟದ ಹಿನ್ನಲೆಯಲ್ಲಿ ಕೆಲವು ಹೊತ್ತು ಟ್ರಾಪೀಕ್ ಜಾಮ್ ಆಗಿತ್ತು. ಪಿ.ಎಸ್.ಐ. ಕುಮಾರ ಹಾಡಕರ ಬೀಗಿ ಪೊಲೀಸ್ ಬಂದೋಬಸ್ತ ಮಾಡಿದ್ದರು.