ಗುಳೇಗುಡ್ಡ

ಗದ್ದುಗೆ ಸಂರಕ್ಷಣೆಗೆ ಆ. 1ರಿಂದ ಸತ್ಯಾಗ್ರಹ

ಗದ್ದುಗೆ ಸಂರಕ್ಷಣೆಗೆ ಆ. 1ರಿಂದ ಸತ್ಯಾಗ್ರಹ
ಗುಳೇದಗುಡ್ಡದ ಮುರಘಾಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ಸುದ್ಧಿಗೋಷ್ಟಿ ನಡೆಯಿತು.

ಗುಳೇದಗುಡ್ಡ 28:  ಪಟ್ಟಣದ ಹೆಸ್ಕಾಂ ಕಚೇರಿ ಎದುರುಗಡೆ ಇರುವ ಲಿಂ. ಶ್ರೀಮುರಘಾಮಠ 6 ನೇ ಶ್ರೀಗಳ ಜೀವಂತ ಸಮಾಧಿಯ ಗದ್ದುಗೆ ಅಕ್ಕಪಕ್ಕ ಹೆದ್ದಾರಿ ಅಗಲೀಕರಣ ನಡೆದಿದ್ದೂ, ಗದ್ದುಗೆ ಎಥಾ ಸ್ಥಿತಿಯಲ್ಲಿ ಸಂರಕ್ಷಿಸಲು  ಅ.1ರಿಂದ ಸರದಿ ಸತ್ಯಾಗ್ರಹ ಆರಂಭಿಸುವುದಾಗಿ ಇಲ್ಲಿನ ಮುರಘಾಮಠದ ಕಾಶೀನಾಥ ಶ್ರೀಗಳು ತಿಳಿಸಿದ್ದಾರೆ. 

ಬುಧವಾರ ಶ್ರೀಮಠದಲ್ಲಿ ನಡೆಸಿದ ಸುದ್ಧಿಗೋಷ್ಟಿಯಲ್ಲಿ ಮಾತನಾಡುತ್ತಾ ಮಠ ಯಾವುದೇ  ರಾಜಕೀಯ ಪಕ್ಷ, ವರ್ಗ, ಜಾತಿ, ಧರ್ಮಕ್ಕೆ ಸೀಮಿತವಾದ ಮಠವಲ್ಲ. ಅದು ಎಲ್ಲ ಭಕ್ತರ ಮಠ. ಶ್ರೀಮಠದ ಗದ್ದುಗೆ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಅದನ್ನು ಇದ್ದ ಸ್ಥಳದಲ್ಲಿ ಉಳಿಸಿ ಅದರ ಎಡಬಲಕ್ಕೆ ರಸ್ತೆ ಅಗಲೀಕರಣ ಮಾಡುವ ಇಚ್ಚಾಶಕ್ತಿ ಎಲ್ಲ ಭಕ್ತರದಾಗಿದೆ. ಆದರೆ ಅಧಿಕಾರಿಗಳು ಮಾತ್ರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಈ ವಿಷಯ ನಮಗೂ ಹಾಗೂ ಭಕ್ತರಿಗೂ ಬೇಸರ ತಂದಿದೆ. ಗದ್ದುಗೆ ಪಕ್ಕದಲ್ಲಿ ಇರುವ ಸೆಡ್ ತೆಗೆಯುವುದಾಗಿ ಸೆಡ್ ಮಾಲಿಕರೇ ಒಪ್ಪಿಕೊಂಡಿದ್ದಾರೆ. ಅಧಿಕಾರಿಗಳು ಆದಷ್ಟು ಬೇಗ ಸಕಾರಾತ್ಮಕ ನಿರ್ಧಾರಕ್ಕೆ ಬರಬೇಕು. ಇಲ್ಲದಿದ್ದರೆ ಆಗಸ್ಟ್‌ 1 ರಿಂದ ಭಕ್ತರಿಂದ ಸರದಿ ಸತ್ಯಾಗ್ರಹವನ್ನು ಗದ್ದುಗೆ ಸ್ಥಳದಲ್ಲಿಯೇ ಆರಂಭಿಸಲಾಗುತ್ತದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೆ ಸಂಪೂರ್ಣ ಹೊಣೆಯಾಗಬೇಕಾಗುತ್ತದೆ ಎಂದರು. 

ಭಕ್ತ ಮುಖಂಡರಾದ ಪ್ರಕಾಶ ಮುರಗೋಡ, ಅಶೋಕ ಹೆಗಡಿ, ಶರಣು ಚಿಕ್ಕನರಗುಂದಿ ಸೇರಿದಂತೆ ಇತರ ಪ್ರಮುಖರು ಮಾತನಾಡಿ, ಗದ್ದುಗೆ ಉಳಿಸಲು ನಮ್ಮ ಹೋರಾಟ ಆರಂಭವಾಗಿದೆ. ಅಧಿಕಾರಿಗಳು ಹೆದ್ದಾರಿ ಮಧ್ಯದಲ್ಲಿ ಅದಕ್ಕೆ ಸರ್ಕಲ್ ತರಹ ಮಾಡಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಬದಲಾಗಿ 400 ವರ್ಷಗಳ ಪುರಾತನ ಧಾರ್ಮಿಕ ಶ್ರದ್ಧಾಕೇಂದ್ರವನ್ನು ಸಂರಕ್ಷಿಸಿದಂತಾಗುತ್ತದೆ. ಲಿಂ.ಶ್ರೀಗಳ ಜೀವಂತ ಸಮಾಧಿ ಇರುವ ಈ ಸ್ಥಳ ಒಂದು ಪವಿತ್ರ ಸ್ಮಾರಕ ಸ್ಥಳವಾಗಿದೆ. ಇದರ ಸಂರಕ್ಷಣೆ ಎಲ್ಲರದೂ ಆಗಿದೆ. ಅಧಿಕಾರಿಗಳು ಮಾತ್ರ ಸಂರಕ್ಷಣೆಗೆ ಮೀನಾಮೇಶ ಮಾಡುತ್ತಿರುವುದು ತಿಳಿಯುತ್ತಿಲ್ಲ. ಆದಷ್ಟು ಬೇಗ ಪುರಸಭೆ ಅಧಿಕಾರಿಗಳು ಗದ್ದುಗೆ ಪಕ್ಕದ ಸೆಡ್ ತೆರವುಗೊಳಿಸಿ ಹೆದ್ದಾರಿ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಇಡೀ ಭಕ್ತ ಸಮೂಹದಿಂದ ಸರದಿ ಸತ್ಯಾಗ್ರಹ ನಡೆಯುತ್ತದೆ ಎಂದು ಎಚ್ಚರಿಸಿದರು.  

ಸೆಡ್ ತೆರುವಿಗೆ ಒಪ್ಪಿಗೆ :  ಸುದ್ಧಿಗೋಷ್ಠಿಯಲ್ಲಿ ಹಾಜರಿದ್ದ ಸೆಡ್ ಮಾಲಿಕ ರವಿ ಬಳಿಗೇರ ಮಾತನಾಡಿ, ಧಾರ್ಮಿಕ ಭಾವನೆಗೆ ಧಕ್ಕೆಬಾರದಂತೆ ನಡೆದುಕೊಳ್ಳುವುದು ನನ್ನ ಕರ್ತವ್ಯ. ಗದ್ದುಗೆ ಉಳಿಸಲು ನಾನು ಅದರ ಪಕ್ಕದ ಖಾನಾವಳಿ ಸೆಡ್‌ನ್ನು ತೆಗೆದುಕೊಳ್ಳುತ್ತೇನೆ ಎಂದು ಎಲ್ಲರ ಸಮ್ಮುಖದಲ್ಲಿ ಒಪ್ಪಿಗೆ ಸೂಚಿಸಿದರು. 

ಮುರಘಾಮಠದ ಕಾಶೀನಾಥ ಶ್ರೀಗಳು, ಪ್ರಕಾಶ ಮುರಗೋಡ, ಅಶೋಕ ಹೆಗಡೆ, ಶರಣು ಚಿಕ್ಕನರಗುಂದ, ಮಧುಸೂಧನ ತಿವಾರಿ, ಸುಧೀರ ಗುಡ್ಡದ, ರವಿ ಬಳಿಗೇರ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. 

ಸುದ್ದಿ ಓದಿ