ಗದ್ದುಗೆ ಸ್ಥಳಾಂತರಕ್ಕೆ ಶ್ರೀಗಳ ಹಾಗೂ ಭಕ್ತರ ವಿರೋಧ : ಪ್ರತಿಭಟನೆ
ಗುಳೇದಗುಡ್ಡ 27: ಗದ್ದುಗೆ ಸ್ಥಳಾಂತರಕ್ಕೆ ಕಳೆದ ಮೂರು ತಿಂಗಳಿಂದ ನಡೆದಿರುವ ಹೋರಾಟ ರಸ್ತೆ ಮೇಲೆಯೇ ಮುರಘಾಮಠ ಶ್ರೀಗಳು ಹಾಗೂ ಭಕ್ತರು ಪ್ರತಿಭಟನೆಗೆ ಕೂಡುವ ಸನ್ನಿವೇಶ ದಿಢೀರನೆ ಮಂಗಳವಾರ ನಿರ್ಮಾಣವಾಯಿತು.
ಒಂದೆರಡು ದಿನಗಳಲ್ಲಿ ರಾತ್ರೋರಾತ್ರಿ ಗದ್ದುಗೆ ಕೀಳುತ್ತಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಮಂಗಳವಾರ ಮುರಘಾಮಠ ಶ್ರೀಗಳು ಭಕ್ತರ ಸಮೇತ ಬೆಳಿಗ್ಗೆ 10 ಗಂಟೆಗೆ ಗದ್ದುಗೆ ಪಕ್ಕ ರಸ್ತೆ ಮೇಲೆಯೇ ಧರಣಿ ಸತ್ಯಾಗ್ರಹ ಕುಳಿತರು.ವರೊಂದಿಗೆ ಭಕ್ತಸಮೂಹವೂ ಪ್ರತಿಭಟನೆ ಕುಳಿತರು.
ರಸ್ತೆ ಬಂದ್ : ಪ್ರತಿಭಟನೆ ರಸ್ತೆ ಮೇಲೆ ಆರಂಭವಾಗುತ್ತಿದ್ದಂತೆ ಹುಬ್ಬಳ್ಳಿ-ಇಲಕಲ್ ಮಾರ್ಗದ ಹಾಗೂ ಗುಳೇದಗುಡ್ಡ-ಬಾಗಲಕೋಟೆ ಮಾರ್ಗದ ಬಸ್ ಸಂಚಾರ ಸುಮಾರು ಎರಡು ಗಂಟೆಗಳ ಕಾಲ ಸ್ಥಗಿತವಾಯಿತು. ಪರಿಣಾಮವಾಗಿ ಪ್ರಯಾಣಿಕರು ರಸ್ತೆಯಲ್ಲಿಯೇ ಸಂಕಷ್ಟ ಅನುಭವಿಸುವಂತಾಯಿತು.
ಶ್ರೀಗಳಿಗೆ ನೋಟಿಸ್ : ಪಟ್ಟಣದಲ್ಲಿ ಹಾಯುವ ಸಂಕೇಶ್ವರ- ಸಂಗಮ ಹೆದ್ದಾರಿಯ ಮಧ್ಯ ಇಲ್ಲಿನ 6 ನೇ ಲಿಂ.ಮುರಘಾಮಠ ಶ್ರೀಗಳ ಗದ್ದುಗೆ ಇದೆ. ಅದು ಸುಮಾರು 400 ವರ್ಷಗಳಿಗೂ ಹಿಂದಿನದು. ಅದರ ಪಕ್ಷದಲ್ಲಿ ರಸ್ತೆ ಇದೆ. ಸದ್ಯ ಹೆದ್ದಾರಿಗಾಗಿ ಅದರ ಅಗಲೀಕರಣ ಕಾರ್ಯ ಭರದಿಂದ ನಡೆದಿದೆ. ರಸ್ತೆ ಅಗಲೀಕರಣದಿಂದ ಮಧ್ಯದಲ್ಲಿ ಬರುವ ಗದ್ದುಗೆ ಸ್ಥಳಾಂತರಕ್ಕೆ ಅಧಿಕಾರಿಗಳು ಕಳೆದ ಕೆಲ ದಿನಗಳ ಹಿಂದೆ ಈಗೀನ ಮುರಘಾಮಠ ಶ್ರೀಗಳಿಗೆ ನೋಟಿಸ್ ನೀಡಿದ್ದರು.
ಸೆಡ್ ತೆರುವಿಗೆ ಒತ್ತಾಯ : ಅದಕ್ಕೆ ಪ್ರತಿಯಾಗಿ ಶ್ರೀಗಳು ಹಾಗೂ ಭಕ್ತರು ಜಿಲ್ಲಾಧಿಕಾರಿಗಳು ಭೇಟಿಯಾದಾಗ, ಗದ್ದುಗೆ ಪಕ್ಕದ ಖಾಸಗಿ ಸೆಡ್ ತೆಗೆಸಿದರೆ ರಸ್ತೆ ಅಗಲೀಕರಣಕ್ಕೆ ಸ್ಥಳಾವಕಾಶವಾಗುತ್ತದೆ. ಸೆಡ್ ಪುರಸಭೆ ಜಾಗೆಯಲ್ಲಿದೆ. ಅದನ್ನು ಸ್ಥಳಾಂತರಿಸಿ ಗದ್ದುಗೆ ಇದ್ದ ಸ್ಥಳದಲ್ಲಿ ಉಳಿಸಿ ಸರ್ಕಲ್ ನಿರ್ಮಿಸಿ ಎನ್ನುವುದು ಭಕ್ತರ ಹಾಗೂ ಶ್ರೀಗಳ ಒತ್ತಾಯ. ಆದರೆ ಶೆಡ್ ಪ್ರಭಾವಿ ವ್ಯಕ್ತಿಗೆ ಸೇರಿದ್ದೂ ಅದನ್ನು ತೆಗೆಸದೇ ಗದ್ದುಗೆ ಸ್ಥಳಾಂತರಕ್ಕೆ ಅಧಿಕಾರಿಗಳು ಮುಂದಾಗಿರುವುದು ಪ್ರತಿಭಟನೆಗೆ ಕಾರಣವೆಂದು ಶ್ರೀಗಳು ಹೇಳಿದರು. ಕೆಲ ದಿನಗಳಿಂದ ರಸ್ತೆ ಕಾಮಗಾರಿ ಗದ್ದುಗೆ ಸಮೀಪಕ್ಕೆ ಬಂದಾಗ ಶ್ರೀಗಳು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ರಸ್ತೆ ಅಗಲೀಕರಣಕ್ಕೆ ಬಾದಾಮಿ ನಾಕೆಯಿಂದ ದೇವಸ್ಥಾನ ಸೇರಿದಂತೆ ಅಕ್ಕಪಕ್ಕದ ಎಲ್ಲವೂಗಳನ್ನೂ ತೆರವುಗೊಳಿಸಿದ ನೀವು ಗದ್ದುಗೆ ಪಕ್ಕದ ಸೆಡ್ ಏಕೆ ತೆಗೆಸುತ್ತಿಲ್ಲ ಎಂದು ಶ್ರೀಗಳು ತಹಸೀಲ್ದಾರ್ ಜಿ.ಎಂ.ಕುಲಕರ್ಣಿ ಅವರನ್ನು ಅದರ ತೆರುವಿಗೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಸೆಡ್ ತೆಗೆಸುವಂತೆ ಪತ್ರ ಬರೆದರೆ ಪುರಸಭೆ ಅದಕ್ಕೆ ಜಾಗೆ ನಮ್ಮದಲ್ಲ ಎಂದು ಹಿಂಬರಹ ಬರೆದಿದೆ. ಸೆಡ್ ತೆರುವು ಮಾಡಿಸಿದರೆ ಗದ್ದುಗೆ ಎಥಾಸ್ಥಿತಿಯಲ್ಲಿ ಇರುವಂತೆ ಬಿಟ್ಟು ಸರ್ಕಲ್ ಮಾಡುವುದಾಗಿ ಪಿಡಬ್ಲ್ಯೂಡಿ ಇಲಾಖೆ ಹೇಳುತ್ತಿದೆ. ಸೆಡ್ ತೆರುವು ಮಾಡದೇ ಪುರಸಭೆ ಏಕೆ ಹಿಂದೇಟು ಹಾಕುತ್ತಿದೆ. ಇಲ್ಲಿ ರಾಜಕಾರಣದ ಪ್ರತಿಷ್ಟೆ ಕಂಡು ಬರುತ್ತಿದೆ ಎಂದು ಪ್ರತಿಭಟನೆ ನಿರತ ಪ್ರಕಾಶ ಮುರಗೋಡ, ಅಶೋಕ ಹೆಗಡೆ, ಸುಧೀರ ಗುಡ್ಡದ ನೇರವಾಗಿ ಆರೋಪಿಸಿದರು.
ಜಗ್ಗಾಟದಲ್ಲಿ ಸೆಡ್ ಪ್ರಚಾರ : ಜಿಲ್ಲಾ ಉಸ್ತುವಾರಿ ಸಚಿವರು ಗದ್ದುಗೆ ಉಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಅದನ್ನು ವಿರೋಧಿಸುವ ಪ್ರಭಾವಿಗಳು ಗದ್ದುಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಈ ಹೋರಾಟ ನಿಲ್ಲವುದಿಲ್ಲ. ಮೂರು ದಿನಗಳಲ್ಲಿ ಸೆಡ್ ತೆಗೆದು ಗದ್ದುಗೆ ಇದ್ದ ಸ್ಥಳದಲ್ಲಿ ಬಿಟ್ಟು ರಸ್ತೆ ಕಾಮಗಾರು ಮುಂದುವರೆಸದಿದ್ದರೆ ಭಕ್ತರು ಎಲ್ಲ ತರದ ಹೋರಾಟಕ್ಕೂ ಸಿದ್ಧ ಎಂದು ಪ್ರಕಾಶ ಮುರಗೋಡ ಅಧಿಕಾರಿಗಳನ್ನು ಎಚ್ಚರಿಸಿದರು. ಈ ಪ್ರತಿಭಟನೆಗೆ ಖಾಸಗಿ ವ್ಯಕ್ತಿಯ ಸೆಡ್ ಗದ್ದುಗೆಕಿಂತ ಹೆಚ್ಚು ಪ್ರಚಾರ ಪಡೆಯುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಗಡುವು-ಪ್ರತಿಭಟನೆ ಹಿಂದಕ್ಕೆ : ಪುರಸಭೆ ಅಧಿಕಾರಿ ಶಿವಕುಮಾರ ಆಲೂರ, ಗುತ್ತಿಗೆದಾರ ಆಲೂರ, ತಹಸೀಲ್ದಾರ್ ಜಿ.ಎಂ.ಕುಲಕರ್ಣಿ ಇವರು ಮೂರು ದಿನಗಳ ಗಡುವನ್ನು ತೆಗೆದುಕೊಂಡು ಸತ್ಯಾಗ್ರಹ ಹಿಂಪಡೆಯಲು ತಿಳಿಸಿದರು. ಮೂರು ದಿನಗಳಲ್ಲಿ ಸೆಡ್ ತೆರುವುಗೊಳಿಸಿ, ಗದ್ದುಗೆ ಸ್ಥಳಾಂತರಿಸದೇ ರಸ್ತೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದ ತಕ್ಷಣ ಶ್ರೀಗಳು ಹಾಗೂ ಪ್ರತಿಭಟನಾಕಾರರು ರಸ್ತೆ ಮೇಲಿಂದ ಎದ್ದರು.
ಮುರಘಾಮಠ ಕಾಶೀನಾಥ ಶ್ರೀಗಳು, ಪ್ರಕಾಶ ಮುರಗೋಡ, ಅಶೋಕ ಹೆಗಡಿ, ಮಹೇಶ ಬಿಜಾಪೂರ, ಸುಧೀರ ಗುಡ್ಡದ, ಮಧುಸೂಧನ ತಿವಾರಿ, ಮಲ್ಲಣ್ಣ ಹಂಗರಗಿ, ಸಾಗರ, ಭುವನೇಶ ಪೂಜಾರ, ಶರಣು ಚಿಕ್ಕನರಗುಂದ, ನಿಂಗಪ್ಪ ಗಾಜಿ, ದೀಪಕ ನೇಮದಿ, ಸೇರಿದಂತೆ ಇನ್ನೂ ಅನೇಕರು ಇದ್ದರು.