ಬಿಸಿಯೂಟ ಯೋಜನೆ ಖಾಸಗೀಕರಣ ವಿರೋಧಿಸಿ ಅಡುಗೆ ಬಂದ್ ಪ್ರತಿಭಟನೆ
ಲೋಕದರ್ಶನ ವರದಿ
ಹೂವಿನ ಹಡಗಲಿ ನ.13: ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಪ್ರಸ್ತಾವನೆ ವಿರೋಧಿಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿ ನೇತೃತ್ವದಲ್ಲಿ ಶುಕ್ರವಾರ ರಾಜ್ಯಾದ್ಯಂತ ಅಡುಗೆ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಕಳೆದ 24 ವರ್ಷಗಳಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಕರಾಗಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರನ್ನು ಬಿಡಿಸಿ ಖಾಸಗೀಕರಣ ಮೂಲಕ ಆಹಾರ ವಿತರಿಸುವ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿದರು.ರಾಜ್ಯದ ಸುಮಾರು ಒಂದು ಲಕ್ಷದ ಹದಿಮೂರು ಸಾವಿರ ಬಿಸಿಯೂಟ ತಯಾರಕ ಮಹಿಳೆಯರ ಉದ್ಯೋಗ ಉಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಶಾಲೆಗಳಲ್ಲಿ ಈಗಾಗಲೇ ಸುಸೂತ್ರವಾಗಿ ನಡೆಯುತ್ತಿರುವ ಬಿಸಿಯೂಟ ತಯಾರಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದು ಸರಿಯಲ್ಲ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.ಎಐಟಿಯುಸಿ ರಾಜ್ಯ ಮಂಡಳಿ ಸದಸ್ಯ ಹಲಗಿ ಸುರೇಶ ಮಾತನಾಡಿ ರಾಜ್ಯದಲ್ಲಿ ಅಕ್ಷರದಾಸೋಹ ಯೋಜನೆ ಜಾರಿಯಾದಾಗಿನಿಂದ ಶಾಲಾ ಮಕ್ಕಳ ಹಾಜರಾತಿ ಹೆಚ್ಚಾಗಿದ್ದು, ಶಿಕ್ಷಣದ ಗುಣಮಟ್ಟವೂ ಏರಿಕೆಯಾಗಿದೆ.
ಆದರೆ, ಈ ಯೋಜನೆಯಡಿ ದುಡಿಯುತ್ತಿರುವ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡದೆ ವಂಚಿಸಲಾಗುತ್ತಿದೆ ಜತೆಗೆ ಬಿಸಿಯೂಟ ತಯಾರಕ ಮಹಿಳೆಯರನ್ನು ಕೆಲಸದಿಂದ ಬಿಡಿಸಿ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರ ನಡೆಸಿದ್ದಾರೆ ಎಂದು ಹಲಗಿ ಸುರೇಶ ಆಕ್ರೋಶ ವ್ಯಕ್ತಪಡಿಸಿದರು. ಮನವಿಯನ್ನು ತಹಶೀಲ್ದಾರ್ ಪರವಾಗಿ ಶಿರಸ್ತೇದಾರ್ ಆಲಂ ಭಾಷಾ ಸ್ವೀಕರಿಸಿದರು.
ಇದೇ ವೇಳೆ ಜಿಲ್ಲಾಧ್ಯಕ್ಷೆ ಹೆಚ್. ಅನುಸೂಯಮ್ಮ, ತಾಲೂಕು ಅಧ್ಯಕ್ಷೆ ಪಿ. ಕವಿತಾ, ಉಪಾಧ್ಯಕ್ಷೆ ಲತಾ ಇಟಗಿ .ಶಿವಲಿಲಾ.ಪುಟ್ಟಮ್ಮ.ಶಿಲ್ಪ.ಸೌಮ್ಯ. ನೂರಾರು ಬಿಸಿಯೂಟ ತಯಾರಕರು ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.ನಂತರ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಅಲಂಬಾಷ ಅವರಿಗೆ ಮನವಿ ಸಲ್ಲಿಸಿದರು