ವಿಜಯಪುರ

ಜಮೀನು ವಿವಾದ: ತಂದೆ–ಮಗನ ಜೋಡಿ ಕೊಲೆ : ಕಬ್ಬು ಕಟಾವು ವಿಚಾರದಲ್ಲಿ ಸಂಘರ್ಷ; ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಾಯ

ಜಮೀನು ವಿವಾದ: ತಂದೆ–ಮಗನ ಜೋಡಿ ಕೊಲೆ : ಕಬ್ಬು ಕಟಾವು ವಿಚಾರದಲ್ಲಿ ಸಂಘರ್ಷ; ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಾಯ
Land dispute: Father and son murdered; conflict arises over sugarcane harvesting; two die on the sp

         ಕೊಲ್ಹಾರ: ತಾಲೂಕಿನ ತಡಲಗಿ ಗ್ರಾಮದಲ್ಲಿ ಜಮೀನು ಲಾವಣಿ (ಗುತ್ತಿಗೆ) ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಸಂಘರ್ಷ ತಂದೆ–ಮಗನ ಜೋಡಿ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

         ಗ್ರಾಮದ ಹನುಮವ್ವ ಮೇಟಿ ಅವರಿಗೆ ಸೇರಿದ ಸುಮಾರು 8 ಎಕರೆ ಜಮೀನಿನ ಲಾವಣಿ ಹಾಗೂ ಹಕ್ಕಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಕಳೆದ ಕೆಲವು ವರ್ಷಗಳಿಂದ ವಿವಾದವಿತ್ತು ಎನ್ನಲಾಗಿದೆ.

            ಹನುಮವ್ವ ಮೇಟಿ ಅವರು ಕಳೆದ ಮೂರು ವರ್ಷಗಳಿಂದ ಹನುಮಂತ ಯಲ್ಲಪ್ಪ ಸಾಲವಾಡಗಿ ಹಾಗೂ ಅವರ ಪುತ್ರ ಮಂಜುನಾಥ್ ಹನುಮಂತ ಸಾಲವಾಡಗಿ ಅವರಿಗೆ ಜಮೀನನ್ನು ಉಳುಮೆ ಮಾಡಲು ನೀಡಿದ್ದರು ಎನ್ನಲಾಗಿದೆ.

             ಈ ಜಮೀನಿನಲ್ಲಿ ಹಿಂದಿನ ವರ್ಷಗಳಲ್ಲಿ ಈರುಳ್ಳಿ ಮೆಕ್ಕೆಜೋಳ ಹಾಗೂ ಕಬ್ಬು ಬೆಳೆ ಬೆಳೆಯಲಾಗಿತ್ತು. ಆದರೆ ಜಮೀನನ್ನು ತಮ್ಮ ಕುಟುಂಬದವರಿಗೇ ನೀಡಬೇಕು ಎಂದು ಗಿರಿಯಪ್ಪ ಮೇಟಿ, ರಾಮಪ್ಪ ಮೇಟಿ, ಹನುಮಂತ ಮೇಟಿ ಸೇರಿದಂತೆ ಮತ್ತೊಂದು ಕುಟುಂಬದವರು ತಕರಾರು ಮಾಡುತ್ತಿದ್ದರು ಎನ್ನಲಾಗಿದೆ.

             ಶುಕ್ರವಾರ ಬೆಳಗ್ಗೆ ಸುಮಾರು 10.30 ರಿಂದ 11 ಗಂಟೆ ವೇಳೆಗೆ ಸಕ್ಕರೆ ಕಾರ್ಖಾನೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಕಬ್ಬು ಕಟಾವಿಗೆ ಗ್ಯಾಂಗ್‌ಗಳನ್ನು ಕರೆತಂದು ಹನುಮಂತ ಹಾಗೂ ಮಂಜುನಾಥ್ ಜಮೀನಿಗೆ ತೆರಳಿದ್ದರು. ಈ ವೇಳೆ ಎದುರಾಳಿ ಕುಟುಂಬದವರು ‘ಹೇಗೆ ಕಬ್ಬು ಕಡಿಯುತ್ತೀರಿ’ ಎಂದು ಪ್ರಶ್ನಿಸಿ ತಕರಾರು ತೆಗೆದಿದ್ದಾರೆ ಎನ್ನಲಾಗಿದೆ.

            ಮಾತಿಗೆ ಮಾತು ಬೆಳೆದು ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಸ್ಥಳದಲ್ಲಿದ್ದ ಕಲ್ಲು ಹಾಗೂ ಕಟ್ಟಿಗೆಗಳಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಹನುಮಂತ ಯಲ್ಲಪ್ಪ ಸಾಲವಾಡಗಿ (65) ಹಾಗೂ ಅವರ ಪುತ್ರ ಮಂಜುನಾಥ್ ಹನುಮಂತ ಸಾಲವಾಡಗಿ (30) ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಹಾದೇವಪ್ಪ , ಮಲ್ಲಪ್ಪ, ಸಿದ್ದಾರ್ಥ ಈ ಮೂವರು ಗಾಯಗೊಂಡಿದ್ದು, ಅವರನ್ನು ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಐವರು ಆರೋಪಿಗಳು ಪೋಲಿಸ್ ವಶಕ್ಕೆ

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಮಾತನಾಡಿ, ಈ ಘಟನೆಗೆ ಸಂಬಂಧಿಸಿದಂತೆ ಕೆಂಚಪ್ಪ, ಗಿರಿಯಪ್ಪ, ರಾಮಪ್ಪ, ಹಣಮಂತ ಸೇರಿದಂತೆ ಹಲ್ಲೆ ನಡೆಸಿದ ಐದು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಸಂಭದ 12 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಇನ್ನುಳಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವದು ಎಂದು  ತಿಳಿಸಿದ್ದಾರೆ.

ಸುದ್ದಿ ಓದಿ