ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ
ಲೋಕದರ್ಶನ ವರದಿ
ಹೂವಿನಹಡಗಲಿ ನ.13: ರಾಜ್ಯದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳಿಗಾಗಿ ಮತ್ತು ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಪಟ್ಟಣದ ಶಾಸ್ತ್ರೀಯ ವೃತ್ತದಲ್ಲಿ ಶುಕ್ರವಾರ ಇಲ್ಲಿನ ಎಐಟಿಯುಸಿ ನೇತೃತ್ವದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕ ಪೇಡರೇಷನ್ ವತಿಯಿಂದ ಪ್ರತಿಭಟನೆ ಹಾಗೂ ಶಾಲೆಗಳಲ್ಲಿ ಬಿಸಿಯೂಟ ಬಂದ್ ಚಳುವಳಿ ನಡೆಸಿದರು. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಎಐಟಿಯುಸಿ ಸಂಯೋಜಿತ ಬಿಸಿಯೂಟ ತಯಾರಕರ ಫೆಡರೇಶನ್ ನ ರಾಜ್ಯ ಮಂಡಳಿ ಸದಸ್ಯ ಕಾಂ. ಹಲಗಿ ಸುರೇಶ ಮಾತನಾಡಿ ರಾಜ್ಯದಲ್ಲಿ ಅಕ್ಷರದಾಸೋಹ ಯೋಜನೆ ಜಾರಿಯಾದಾಗಿನಿಂದ ಶಾಲಾ ಮಕ್ಕಳ ಹಾಜರಾತಿ ಹೆಚ್ಚಾಗಿದ್ದು, ಶಿಕ್ಷಣದ ಗುಣಮಟ್ಟವೂ ಏರಿಕೆಯಾಗಿದೆ.
ಆದರೆ, ಈ ಯೋಜನೆಯಡಿ ದುಡಿಯುತ್ತಿರುವ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡದೆ ವಂಚಿಸಲಾಗುತ್ತಿದೆ ಜತೆಗೆ ಬಿಸಿಯೂಟ ತಯಾರಕ ಮಹಿಳೆಯರನ್ನು ಕೆಲಸದಿಂದ ಬಿಡಿಸಿ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರ ನಡೆಸಿದ್ದಾರೆ ಎಂದು ಹಲಗಿ ಸುರೇಶ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಬಿಸಿಯೂಟ ಕಾರ್ಯಕರ್ತೆಯರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಲಾಯಿತು.ಇದೇ ವೇಳೆ ಸಂಘಟನೆಯಜಿಲ್ಲಾ ಅಧ್ಯಕ್ಷೆ ಹೆಚ್.ಅನುಸೂಯ, ಜಿಲ್ಲಾ ಕಾರ್ಯದರ್ಶಿ ಪುಷ್ಪಾ, ತಾಲೂಕು ಅಧ್ಯಕ್ಷೆ ಪಿ.ಕವಿತಾ, ಜಿಲ್ಲಾ ಉಪಾಧ್ಯಕ್ಷೆ ಲತಾ ಇಟಗಿ, ಜಂಗ್ಲಿಸಾಬ್.ಮುಕುಂದಗೌಡ ಸೇರಿದಂತೆ ಬಿಸಿಯೂಟ ಕಾರ್ಯ ಕರ್ತೆಯರು ಇದ್ದರು.