ದಲಿತರಿಗಾಗಿ ಮೀಸಲಿಟ್ಟ ಹಣ ದುರ್ಬಳಕೆ ಪ್ರತಿಭಟನೆ
ಹೂವಿನ ಹಡಗಲಿ 02: ನಾನಾ ನಿಗಮಗಳು, ವಿಶೇಷ ಯೋಜನೆಗಳ ಮೂಲಕ ದಲಿತರಿಗಾಗಿ ಮೀಸಲಿಟ್ಟ ಹಣ ದುರ್ಬಳಕೆ ಮಾಡಿಕೊಂಡಿರುವ ಸರಕಾರ ಕೂಡಲೇ ಹಿಂತಿರುಗಿಸಿ ನ್ಯಾಯ ಒದಗಿಸುವಂತೆ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಒತ್ತಾಯಿಸಿದೆ.ಈ ಕುರಿತು ಅಂದೋಲನದ ಸದಸ್ಯರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಮಾತನಾಡಿದ ಆಂದೋಲನದ ರಾಜ್ಯ ಸಂಚಾಲಕ ಸುರೇಶ ಹಲಗಿ, ವಾಲ್ಮೀಕಿ ನಿಗಮ ಸೇರಿ ನಾನಾ ನಿಗಮಗಳಲ್ಲಿ ನಡೆದಿರುವ ನೂರಾರು ಕೋಟಿ ರೂ.ಗಳನ್ನು ಸರಕಾರ ಕೂಡಲೇ ವಾಪಸ್ ಪಡೆಯಬೇಕು.
ಈ ಮೂಲಕ ದಲಿತರನ್ನು ಮತ್ತೆ ಮುನ್ನಲೆಗೆತರಬೇಕು. ಎಸ್ಸಿ, ಎಸ್ಪಿ ನಿಗಮ, ಪಜಾ ಮತ್ತು ಗಿರಿಜನ ಉಪಯೋಜನೆಗಳ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ದಲಿತರನ್ನು ಪರೋಕ್ಷವಾಗಿ ತುಳಿಯುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.ಚುನಾವಣೆ ಬಂದಾಗ ಮಾತ್ರ ದಲಿತರು, ಗಿರಿಜನರು ನೆನಪಾಗುತ್ತಾರೆ. ಹಣ ದುರು ಪಯೋಗ, ದಲಿತರು, ಮಹಿಳೆಯರ ಮೇಲಿನ ದೌರ್ಜನ್ಯ, ಕೋಮುದ್ವೇಷ, ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳ ದಮನ ನೀತಿ ವಿರೋಧಿಸಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ಕಾಂಗ್ರೆಸ್ನ್ನು ಬೆಂಬಲಿಸಿದ್ದು ಮಹಾಪರಾಧವಾದಂತಾಗಿದೆ.
ಆದ್ದರಿಂದ ರಾಜ್ಯದಲ್ಲಿ ನಡೆದಿರುವ ನಿಗಮಗಳಲ್ಲಿನ ಹಗರಣ, ಹಣ ವರ್ಗಾವಣೆ ಸೇರಿ ಎಲ್ಲ ಪ್ರಕರಣಗಳನ್ನೂ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಶಿಕ್ಷೆ ವಿಧಿಸುವಂತಾಗಬೇಕೆಂದು ಅವರು ಆಗ್ರಹಿಸಿದರು. ತಾಲೂಕು ಸಂಚಾಲಕ ಬಸವರಾಜ ಸಂಶಿ ಮಾತನಾಡಿ, ಇತ್ತೀಚೆಗೆ ವಿಮುಕ್ತ ದೇವದಾಸಿಯರ ಮಕ್ಕಳಿಗೆ ಉದ್ಯೋಗ ಭದ್ರತೆ ಇಲ್ಲದಂತಾಗಿದೆ. ಹಾಸ್ಟೆಲ್ ಸೇರಿ ಶೈಕ್ಷಣಿಕ ಸೌಲಭ್ಯಗಳಲ್ಲಿ ಕಡಿತವಾಗುತ್ತಿವೆ. ಎಂದು ಆರೋಪಿಸಿದರು.ವಿಮುಕ್ತ ದೇವದಾಸಿ ಮಹಿಳಾ ಸಂಘಟನೆ ಅಧ್ಯಕ್ಷೆ ಎಚ್.ದಂಡಮ್ಮ, ತಾಲೂಕು ಅಧ್ಯಕ್ಷ ಡಿ.ಮುಕುಂದಗೌಡ, ಕಾಗನೂರ ಮಲ್ಲೇಶ ದಲಿತ ಮುಖಂಡ ಆನಂದ ಹೊಸಳ್ಳಿ, ಶಿವಪುತ್ರ್ಪ ಚಿನ್ನಮ್ಮ ಮಾಗಳ, ಮಾನ್ಯರ ಮಸಲವಾಡ ದಂಡಮ್ಮ, ರೇಣುಕಮ್ಮ, ಇತರರಿದ್ದರು.