ಮುಂದಿನ ಪೀಳಿಗೆಯನ್ನು ಜೀವಂತವಾಗಿರಿಸಲು ಸ್ಮಾರಕಗಳ ರಕ್ಷಣೆ ಅವಶ್ಯಕ: ಡಾ ಎಂ ವೈ ಸಾವಂತ್
ಧಾರವಾಡ,21 : ಮುಂದಿನ ಪೀಳಿಗೆಯನ್ನು ಜೀವಂತವಾಗಿರಿಸಲು ಸ್ಮಾರಕಗಳ ರಕ್ಷಣೆ ಅವಶ್ಯಕ. ನಮ್ಮ ನಾಡಿನಲ್ಲಿ ಅನೇಕ ಸ್ಮಾರಕಗಳು, ದೇವಾಲಯಗಳು, ಗುಹೆಗಳು, ಮಸೀದಿ, ಚರ್ಚ, ಹಾಗು ಶಾಸನಗಳಿದ್ದು ಇವುಗಳು ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಅವುಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಇತಿಹಾಸ ತಜ್ಞರಾದ. ಡಾ ಎಂ ವೈ ಸಾವಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಕೆ ಇ ಬೋರ್ಡ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರದಂದು ಐಕ್ಯೂಎಸ್ಇ, ಇತಿಹಾಸ ವಿಭಾಗ ಹಾಗೂ ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ, ಐತಿಹಾಸಿಕ ಪರಂಪರೆಯ ಸಂರಕ್ಷಣೆ : ಮಹತ್ವ ಮತ್ತು ಅವಶ್ಯಕತೆ ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲ ಕಾರ್ಯಾಧ್ಯಕ್ಷ ಡಾ. ಗಿರಿಧರ್ ಕಿನ್ನಾಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಪರಂಪರೆ ಹಾಗು ನಮ್ಮ ಪೂರ್ವಜರನ್ನು ಮರೆತರೆ ನಮ್ಮ ಇತಿಹಾಸ ಮರೆತಂತೆ, ಪೂರ್ವಜರ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಚಾರ್ಯ ಪ್ರೊ. ಎಂ ಎ ಸಿದ್ಧಾಂತಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯ ಇತಿಹಾಸವನ್ನು ಅರ್ಥೈಸಿಕೊಳ್ಳಬೇಕೆಂದು ಎಂದು ಸಲಹೆ ನೀಡಿದರು.
ಶಿವಾನಂದ್ ಗಾಯಕ್ವಾಡ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲ ಸಂಯೋಜಕಿ ಮಧುಮತಿ ಶಿವಪೂಜಿ ಹಾಗೂ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ಇತಿಹಾಸ ವಿಭಾಗದ ಮುಖ್ಯಸ್ಥ ಡಾ ಸುರೇಶ್ ಹಾನಗಲ್ ನೆರವೇರಿಸಿದರು. ಇತಿಹಾಸ ಉಪನ್ಯಾಸಕ ಕೆ ಎಸ್ ಮಡಿವಾಳರ್ ವಂದಿಸಿದರು.