ಗುಳೇಗುಡ್ಡ

ಮಣ್ಣಿನ ಆರೋಗ್ಯ ಸಂರಕ್ಷಿಸಿ: ಡಾ. ಮಂಜುನಾಥ

ಮಣ್ಣಿನ ಆರೋಗ್ಯ ಸಂರಕ್ಷಿಸಿ: ಡಾ. ಮಂಜುನಾಥ
ತಾಲೂಕಿನ ಕಟಗಿನಹಳ್ಳಿ ಗ್ರಾಮದಲ್ಲಿ ರೈತರಿಗೆ ಉಚಿತ ಸ್ಪ್ರೇ ಯಂತ್ರ ನೀಡುತ್ತಿರುವುದು

ಗುಳೇದಗುಡ್ಡ 20:  ರೈತರು ಹೆಚ್ಚಿನ ಫಸಲನ್ನು ಪಡೆಯಲು ಮಣ್ಣಿನ ಆರೋಗ್ಯ ಮುಖ್ಯ. ರಾಸಾಯನಿಕ ಗೊಬ್ಬರ ಹೆಚ್ಚು ಬಳಸದೇ ಅಗತ್ಯಕ್ಕನುಗುಣವಾಗಿ ಕಡಿಮೆ ಪ್ರಮಾಣದಲ್ಲಿ ಬಳಸಿ ಮಣ್ಣಿನ ಆರೋಗ್ಯ ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ಇಪ್ಕೋ ಕಂಪನಿಯ ವಿಜ್ಞಾನಿ ಡಾ.ಮಂಜುನಾಥ ಹೇಳಿದರು. 

ಅವರು ಮಂಗಳವಾರ ತಾಲೂಕಿನ ಕಟಗಿನಹಳ್ಳಿ ಮತ್ತು ಲಾಯದಗುಂದಿ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಇಪ್ಕೋ ಕಂಪನಿಯ ಉಚಿತ ಮಣ್ಣು ಪರೀಕ್ಷಾ ಅಭಿಯಾನದಲ್ಲಿ ಮಾತನಾಡಿ, ಕೃಷಿಯಲ್ಲಿ ಪರಾ​‍್ಯಯ ಬೆಳೆ, ಮರದ ಎಲೆಯಿಂದ  ಸಾವಯವ ಗೊಬ್ಬರ ತಯಾರಿಸುವುದು, ನ್ಯಾನೋ ಗೊಬ್ಬರವನ್ನು ನೀರಿನಲ್ಲಿ ಬೆರೆಸಿ ಸ್ಪ್ರೇ ಮಾಡುವುದರಿಂದ ಗಿಡಗಳ ಆರೋಗ್ಯ ಮತ್ತು ಮಣ್ಣಿನ ಆರೋಗ್ಯ ರಕ್ಷಿಸಿದಂತಾಗುತ್ತದೆ. ಇದರಿಂದ ಉತ್ತಮ ಇಳುವರಿ ಪಡೆಯಬಹುದು. ಮಿಶ್ರ ಬೇಸಾಯವಾದ ಕೃಷಿ ಜೊತೆಗೆ ಹೈನುಗಾರಿಕೆ, ಕುರಿ ಸಾಕಾಣಿಕೆಗಳನ್ನು ಮಾಡುತ್ತ ಕೃಷಿಯಿಂದ ಆರ್ಥಿಕ ಅಭಿವೃದ್ಧಿ ಹೊಂದಬೇಕೆಂದು ಹೇಳಿದರು. 

ಇಪ್ರೋ ಕಂಪನಿ ಮ್ಯಾನೇಜರ್ ಗುರುರಾಜ ಮಾತನಾಡಿ, ಮಣ್ಣಿಗೆ 16 ಪೋಷಕಾಂಶಗಳ ಅಗತ್ಯತೆ ಇದೆ. ರೈತರು ರಾಸಾಯನಿಕ ಗೊಬ್ಬರಗಳನ್ನು ಬಳಸುವಾಗ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಭೂಮಿಯಲ್ಲಿ ಯಾವ ಪೋಷಕಾಂಶಗಳ ಕೊರತೆ ಕಂಡು ಬರುತ್ತದೆಯೋ ಅದಕ್ಕೆ ಸಂಬಂಧಿಸಿದ  ಗೊಬ್ಬರವನ್ನು ಮಾತ್ರ ಹಾಕಬೇಕು. ಮಣ್ಣ ಪರೀಕ್ಷೆ ಮಾಡದೇ ಗೊಬ್ಬರ ಬಳಸಿದರೆ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ  ಎಂದರು. 

ಇದೇ ಸಂದರ್ಭದಲ್ಲಿ ಇಪ್ರೋ ಕಂಪನಿಯಿಂದ ರೈತರಿಗೆ ಹ್ಯಾಂಡ್ ಸ್ಪ್ರೇ ಯಂತ್ರವನ್ನು ನೀಡಲಾಯಿತು. ಲಾಯದಗುಂದಿ ಪಿಕೆಪಿಎಸ್ ಅಧ್ಯಕ್ಷ ಪ್ರಕಾಶ ಗೌಡ್ರ, ಪಿಕೆಪಿಎಸ್ ಸದಸ್ಯರಾದ ಶರಣಪ್ಪ ಅಂಬಿಗೇರ, ಮಹಾಂತೇಶ ಅಳಗುಂಡಿ, ಗ್ರಾಪಂ ಸದಸ್ಯ ಅಂತೋನಿ ನಡಕಟ್ಟಿನ, ಎಸ್‌ಡಿಎಂಸಿ ಅಧ್ಯಕ್ಷ ಜಟ್ಟೆಪ್ಪ ಗೌಡ್ರ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. 


ಸುದ್ದಿ ಓದಿ