ಹಿಂದೂಸ್ತಾನ ಮೈನಾರಿಟಿ ಮಲ್ಟಿಪರಪಜ್ ಸೊಸೈಟಿಗೆ ಲಾಭ
ಲೋಕದರ್ಶನ ವರದಿ
ಬೈಲಹೊಂಗಲ 16: ದಿ ಹಿಂದೂಸ್ತಾನ ಮೈನಾರಿಟಿ ಮಲ್ಟಿಪರಪಜ್ ಕೋ.ಆಫ್ ಸೊಸೈಟಿ 7.33 ಲಕ್ಷ ರೂ. ನಿವ್ಹಳ ಲಾಭಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹ್ಮದಸಾಹೇಬ ನದಾಫ ಹೇಳಿದರು.
ಪಟ್ಟಣದ ಇಂಚಲ ರಸ್ತೆಯಲ್ಲಿರುವ ಎಂ.ಎ.ಎ ಹೈಸ್ಕೂಲ ಆವರಣದಲ್ಲಿರುವ ಸಭಾಭವನದಲ್ಲಿ ಜರುಗಿದ ಸಂಸ್ಥೆಯ 18 ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು 4 ಕೋಟಿ 50 ಲಕ್ಷ ರೂ. ಠೇವಣಿ, 3 ಕೋಟಿ 95 ಲಕ್ಷ ರೂ. ಸಾಲ ವಿತರಿಸಿದ್ದು, 35 ಲಕ್ಷ ರೂ. ಶೇರು, 6 ಕೋಟಿ 23 ಲಕ್ಷ ರೂ. ದುಡಿಯುವ ಬಂಡವಾಗಳ ಹೊಂದಿ ಪ್ರತಿವರ್ಷ ಲಾಭದಲ್ಲಿ ಮುನ್ನಡೆಯಲು ಆಡಳಿತ ಮಂಡಳಿಯ ಹಾಗೂ ಗ್ರಾಹಕರ ಸಹಕಾರ ಮತ್ತು ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಸೇವೆಯ ಕಾರಣವಾಗಿದ್ದು, ಸಾಲ ಪಡೆದು ಸದಸ್ಯರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದರು.
ಉಪಾಧ್ಯಕ್ಷ ಅಬ್ದುಲಕಲಾಂ ಆಜಾದ ನದಾಫ ಅವರು ಸಂಘದ ವರದಿ ಮಂಡಿಸಿದರು.
ಹಿರಿಯರಾದ ಹಜರತಸಾಬ ದೊಡವಾಡ, ಸಂಸ್ಥೆಯ ನಿರ್ದೇಶಕರಾದ ಇರ್ಷಾದಅಹ್ಮದ ಪಾಟೀಲ, ಶೌಕತಅಲಿ ಬುಡ್ರಕಟ್ಟಿ, ಶಫೀಅಹ್ಮದ ಮುಲ್ಲಾ ಚಿತ್ರನಟ ಪುನೀತರಾಜಕುಮಾರ, ಸತ್ಯಜಿತ ಹಾಗೂ ಸಂಸ್ಥೆಯ ನಿರ್ದೇಶಕ ಮಹ್ಮದರಫೀಕ ನದಾಫ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನದಾಫ ಪಿಂಜಾರ ಸಮಾಜದ ಯುವಕ ಸಂಘದ ಕಾರ್ಯಕರ್ತರು ಸಂಸ್ಥೆಯ ಅಧ್ಯಕ್ಷ ಮಹ್ಮದಸಾಬ ನದಾಫ ಹಾಗೂ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ 30 ಜನ ಗಣ್ಯರನ್ನು ಸನ್ಮಾನಿಸಿದರು.
ಮೌಲಾನಾ ಬೇಪಾರಿ ಪ್ರಾರ್ಥನೆ ಸಲ್ಲಿಸಿದರು. ಕುತುಬುದ್ದಿನ ಮದಲಮಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸತಾರಅಹ್ಮದ ನದಾಫ ವರದಿ ಮಂಡಿಸಿದರು. ಸಾಜೀದ ಬಾಬನ್ನವರ ನಿರೂಪಿಸಿದರು. ರಾಜೇಸಾಬ ಹುದಲಿ ವಂದಿಸಿದರು.