ಗುಳೇಗುಡ್ಡ

ಗ್ರಾಮ ವಾಸ್ತವ್ಯದಿಂದ ಸಮಸ್ಯೆ ಪರಿಹಾರ : ತಹಸೀಲ್ದಾರ್ ಕುಲಕರ್ಣಿ

ಗ್ರಾಮ ವಾಸ್ತವ್ಯದಿಂದ ಸಮಸ್ಯೆ ಪರಿಹಾರ : ತಹಸೀಲ್ದಾರ್ ಕುಲಕರ್ಣಿ
ಗುಳೇದಗುಡ್ಡ ತಾಲೂಕಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತೋಗುಣಸಿ ಗ್ರಾಮದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು.

ಗುಳೇದಗುಡ್ಡ 17: ಕಚೇರಿ ಕಲಸಗಳ ಒತ್ತಡದಲ್ಲಿ ಗ್ರಾಮಸ್ಥರ ಕೆಲವು ಕುಂದು ಕೊರತೆಗಳನ್ನು ವಿವರವಾಗಿ ಕೇಳಲು ಹಾಗೂ ಅವುಗಳಿಗೆ ಪರಿಹಾರ ಒದಗಿಸಲು ಸಾಧ್ಯವಾಗದಿರಬಹುದು. ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಅತ್ಯಂತ ಅನುಕೂಲವಾಗಿದೆ ಎಂದು ಇಲ್ಲಿನ ತಹಸೀಲ್ದಾರ್ ಜಿ.ಎಂ.ಕುಲಕರ್ಣಿ  ಹೇಳಿದರು.  

ಶನಿವಾರ ಗುಳೇದಗುಡ್ಡ ತಾಲೂಕಿನ ತೋಗುಣಸಿ ಗ್ರಾಮದ ಅಮರೇಶ್ವರ ಶ್ರೀಮಠದಲ್ಲಿ  ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಗ್ರಾಮಸ್ಥರು ತಮ್ಮ ಏನೇ ಕುಂದು-ಕೊರತೆಗಳಿದ್ದರೆ ಮನ ಬಿಚ್ಚಿ ಹೇಳಿಕೊಳ್ಳಿ. ಅದಕ್ಕೆ ತಾಲೂಕಿನ ಎಲ್ಲ ಇಲಾಖಾ ಅಧಿಕಾರಿಗಳು ಬಗೆ ಹರಿಸುತ್ತಾರೆ. ಮೇಲಾಧಿಕಾರಿಗಳ ಮಟ್ಟದಲ್ಲಿ ಬಗೆ ಹರಿಸಬೇಕಿದ್ದ ಸಮಸ್ಯೆಗಳಿಗೆ  ಅವರೊಂದಿಗೆ ಚರ್ಚಿಸಿ ಪರಿಹರಿಸಲಾಗುತ್ತದೆ ಎಂದರು.  

ವಿವಿಧ ಇಲಾಖೆಗಳಿಗೆ ಸಂಭದಿಸಿದ ಗ್ರಾಮಸ್ಥರ ಕುಂದುಕೊರತೆಗಳನ್ನು ಸಭೆಯಲ್ಲಿ ಚರ್ಚಿಸಿ ಬಗೆ ಹರಿಸಲಾಯಿತು. ಇನ್ನೂ ಕೆಲವು ಅರ್ಜಿಗಳನ್ನು ನಂತರ ಬಗೆ ಹರಿಸುವುದಾಗಿ ತಿಳಿಸಲಾಯಿತು. 

ಅರ್ಜಿಗಳಲ್ಲಿ 37 ಬಾಕಿ : ಸಾರ್ವಜನಿಕರು ನೀಡಿದ ಒಟ್ಟು 42 ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಂದಾಯ ಇಲಾಖೆಗೆ ಬಂದಿದ್ದ ಒಟ್ಟು 10 ಅರ್ಜಿಗಳನ್ನು ಸ್ವೀಕರಿಸಿ ಅದರಲ್ಲಿ 2 ಅರ್ಜಿಗಳನ್ನು, ಭೂಮಾಪನ ಇಲಾಖೆಯ 6 ಅರ್ಜಿಗಳಲ್ಲಿ 3 ಅರ್ಜಿಗಳನ್ನು ಅಂದರೆ ಒಟ್ಟು 5 ಅರ್ಜಿಗಳನ್ನು ಸ್ಥಳದಲ್ಲಿಯೇ ನಿಖಾಲ ಮಾಡಲಾಯಿತು. ಉಳಿದಂತೆ ಶಿಕ್ಷಣ ಇಲಾಖೆಯ 2 ಅರ್ಜಿಗಳು, ಆಹಾರ ಇಲಾಖೆಯ 1 ಅರ್ಜಿ, ಆರೋಗ್ಯ ಇಲಾಖೆಯ 2 ಅರ್ಜಿ, ಕಂದಾಯ ಇಲಾಖೆಯ 8 ಅರ್ಜಿ, ಭೂಮಾಪನ ಇಲಾಖೆಯ 3 ಅರ್ಜಿ, ಹೆಸ್ಕಾಂ ಇಲಾಖೆಯ 1 ಅರ್ಜಿ, ನೀರಾವರಿ ಇಲಾಖೆಯ 1 ಅರ್ಜಿ, ಆರ್‌ಡಿಪಿಆರ್ ಪಂಚಾಯತ್ ಇಲಾಖೆಗೆ ಬಂದಿದ್ದ 19 ಅರ್ಜಿ ಹೀಗೆ ಒಟ್ಟಿ 37 ಅರ್ಜಿಗಳನ್ನು ಬಾಕಿ ಇಡಲಾಯಿತು.  

ತೋಗುಣಸಿ ಗ್ರಾಮದ ಹಿರಿಯ ನಾಗರಿಕರಿಗೆ ಸನ್ಮಾನ ಮಾಡಲಾಯಿತು. ತೋಗುಣಸಿಯ ಅಮರೆಶ್ವರ ಮಠದ ಡಾ. ನೀಲಕಂಠ ಶ್ರೀಗಳು, ಕಂದಾಯ ನೀರೀಕ್ಷಕ ಮಹಾಂತೇಶ ಅಂಗಡಿ, ಉಪತಹಸೀಲ್ದಾರ್ ವಿರೇಶ ಬಡಿಗೇರ, ಕೃಷಿ ಅಧಿಕಾರಿ ಆನಂಗೌಡ ಗೌಡರ್, ಪಿಎಸೈ ಚಂದ್ರಶೇಖರ ಕಿರಶ್ಯಾಳ,  ತೋಗುಣಸಿ ವೈದ್ಯಾಧಿಕಾರಿ ಡಾ. ಬಸವರಾಜ ಹೆಬ್ಬಾಳ, ಹೆಸ್ಕಾಂ ಇಲಾಖೆಯ ಕಲಾಲ, ಗ್ರಾಪಂ ಎಡಿಎಲ್‌ಆರ್ ಮೇತ್ರಿ, ಸೇರಿದಂತೆ ಎಲ್ಲ ಇಲಾಖೆಗಳ ಸಿಬ್ಬಂದಿ ಹಾಜರಿದ್ದು ಗ್ರಾಮಸ್ಥರ ಅರ್ಜಿಗಳನ್ನು ಸ್ವೀಕರಿಸಿದರು. 

ಸುದ್ದಿ ಓದಿ