ಸ್ವಾತಂತ್ರ್ಯೋತ್ಸವದ ಪಾಕ್ಷಿಕ ದಿನಾಚರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ ಜುಲೈ.17: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧಾರವಾಡ ಜಿಲ್ಲೆಯ ಪಾತ್ರ ಮಹತ್ವದ್ದಾಗಿದ್ದು, ಜಿಲ್ಲೆಯ ಹೋರಾಟಗಾರರು, ಘಟನೆಗಳು, ಚಳುವಳಿಗಳು ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ನೆರವು ನೀಡಿದ ಸಂಘ, ಸಂಸ್ಥೆಗಳ ಕುರಿತು ಜಿಲ್ಲೆಯ ಜನರಲ್ಲಿ, ಯುವ ಸಮೂಹದಲ್ಲಿ ಅರಿವು ಮೂಡಿಸುವ ಮತ್ತು ಸ್ವಾಭಿಮಾನ ಹೆಮ್ಮೆ ಪಡುವಂತೆ ಇತಿಹಾಸ ತೊರಿಸುವ ವಿಶೇಷ ಕಾರ್ಯಕ್ರಮಗಳನ್ನು ಆಗಸ್ಟ್ 1 ರಿಂದ 14 ರವರೆಗೆ ಜಿಲ್ಲಾಡಳಿತದಿಂದ ನಮ್ಮ ಜಿಲ್ಲೆಯ ಐತಿಹಾಸಿಕ ಹಿನ್ನೋಟ, ಭವ್ಯ ಭವಿಷ್ಯದ ಮುನ್ನೋಟ ಆಶಯದಲ್ಲಿ ಸ್ವಾತಂತ್ಯೋತ್ಸವದ ಪಾಕ್ಷಿಕ ದಿನಾಚರಣೆ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ನಿನ್ನೆಯ (ಜು.16)ದಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಹಿರಿಯ ಸಂಶೋಧಕರ, ವಿದ್ವಾಂಸರ ಐತಿಹಾಸಿಕ ಸಂಘಟಣೆಗಳ ಪ್ರಮುಖರ, ಜಾನಪದ ತಜ್ಞರ, ವಿಶ್ವವಿದ್ಯಾಲಯ ಪ್ರಾಧ್ಯಪಕರ ಮತ್ತು ರೋಟರಿ, ಲೈನ್ಸ್ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಐತಿಹಾಸಿಕ ಸ್ವಾತಂತ್ರ್ಯೋತ್ಸವದಲ್ಲಿ ಧಾರವಾಡ ಜಿಲ್ಲೆಯ ಪಾತ್ರ ಮಹತ್ವದ ಗುರುತುಗಳ ದಾಖಲಿಕರಣ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಸ್ವಾತಂತ್ರ್ಯ ಇತಿಹಾಸದ ಪುಟಗಳಲ್ಲಿ ಧಾರವಾಡ ಜಿಲ್ಲೆ ವಿಶೆಷವಾಗಿ ದಾಖಲಾಗಿದೆ. ಅಸಹಕಾರ ಚಳುವಳಿಯಿಂದ ಹಿಡಿದು ಚಲೇಜಾವ ಚಳುವಳಿವರೆಗೆ ಜಿಲ್ಲೆಯ ಅನೇಕ ಮಹನೀಯರು ಭಾಗವಹಿಸಿ, ತಮ್ಮ ಆಸ್ತಿ, ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಹುತಾತ್ಮರ ಸ್ಮಾರಕಗಳು, ಸಂಸ್ಥೆಗಳು ಇವತ್ತಿಗೂ ಇವೆ. ಇವುಗಳ ಕುರಿತು ಬೆಳಕು ಚೆಲ್ಲುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ಕಲೆ, ಸಾಹಿತ್ಯ ಸಂಸ್ಕೃತಿಗೆ ಹೆಸರಾದ ಧಾರವಾಡ ಐತಿಹಾಸಿಕತೆಗೆ ಸಾಕ್ಷಿಯಾದ ಅನೇಕ ಕುರುಹುಗಳನ್ನು ಹೊಂದಿದೆ. ಧಾರವಾಡ ಜಿಲ್ಲೆಯ ಇತಿಹಾಸ, ಸ್ಮಾರಕ, ಶಾಸನ, ಶಿಲ್ಪಕಲೆಗಳ ಬಗ್ಗೆ ಅಧ್ಯಯನ ಮಾಡಿರುವ ಇತಿಹಾಸ ತಜ್ಞರ, ಸಂಶೋಧಕರ ಮತ್ತು ಪ್ರಾಧ್ಯಾಕರ ಸಹಕಾರದಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸ್ವಾತಂತ್ರ್ಯೊತ್ಸವದ ಪಾಕ್ಷಿಕ ದಿನಾಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ವಿಶ್ವವಿದ್ಯಾಲಯ ಮಟ್ಟದ ವಿಚಾರ ಸಂಕಿರಣ, ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ 77ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ 77 ವಿಶೇಷ ಉಪನ್ಯಾಸಗಳ ಆಯೋಜನೆ, ಪುರಾತತ್ವ ಇಲಾಖೆಯಿಂದ ಸ್ವಾತಂತ್ರ್ಯ ಸಂಗ್ರಾಮದ ಕುರಿತು ವಿಶೇಷ ಛಾಯಾಚಿತ್ರ ಪ್ರದರ್ಶನ, ಜಿಲ್ಲೆಯ ಸ್ವಾತಂತ್ರ್ಯ ಹೊರಾಟಗಾರರ ಭಾವಚಿತ್ರಗಳ ಪ್ರದರ್ಶನ, ಪಾರಂಪಕರಿಕ ನಡಿಗೆ, ರಂಗಾಯಣದಿಂದ ನಾಟಕ, ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಸ್ವಾತಂತ್ರ್ಯದ ವಿಶೇಷ ರೂಪಕ, ಸ್ವಾತಂತ್ರ್ಯ ಹೊರಾಟಗಾರರ ವೇಷ ಭೂಷಣ ಸ್ಪರ್ಧೆ, ಲಾವಣಿ, ಗಿಗಿ, ಹಂತಿ ಹಾಡುಗಳ ಜಾನಪದ ಸ್ವಾತಂತ್ರ್ಯ ವೈಭವ ಮುಂತಾದ ವಿಭಿನ್ನ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ಅನೇಕರ ಸಲಹೆ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೆನವುಗಳ ಪುಸ್ತಕವನ್ನು ವಿಚಾರ ಸಂಕಿರಣ ಮತ್ತು ವಿಶೇಷ ಉಪನ್ಯಾಸಗಳ ಸಂಕಲನವನ್ನು ಪ್ರಕಟಿಸಲು ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಕ್ರಮವಹಿಸಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ, ಮೊಡಿತಜ್ಞ ಡಾ.ಎಂ.ವೈ. ಸಾವಂತ ಮಾತನಾಡಿ, ಸ್ವಾತಂತ್ರ್ಯ ಪೂರ್ವದ ಸಶಸ್ತ್ರ ಬಂಡಾಯದಿಂದ ಚಲೇಜಾವ ಚಳುವಳಿವರೆಗೆ ಅವಿಭಜಿತ ಧಾರವಾಡ ಜಿಲ್ಲೆ ಪ್ರಮುಖ ಪಾತ್ರ ವಹಿಸಿದೆ. ಈ ಕುರಿತು ಕರಾರುವಕ್ಕು ದಾಖಲೆಗೆ ಜಿಲ್ಲಾಡಳಿತದ ಈ ಪ್ರಯತ್ನ ಸಹಕಾರಿ ಆಗಲಿದೆ. ಸಕ್ರಿಯವಾಗಿ ಭಾಗವಹಿಸಿ, ಸಹಕಾರ ನೀಡುತ್ತೇನೆ ಎಂದರು.
ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಪ್ರೋ.ಈರಣ್ಣ ಪತ್ತಾರ ಅವರು ಮಾತನಾಡಿ, ಸ್ವಾತಂತ್ರ್ಯದ ಸಂಗ್ರಾಮದಲ್ಲಿ ಬಲಿದಾನವಾದ ಅನೇಕರ ಸ್ಮಾರಕಗಳು, ಹೊರಾಟಕ್ಕೆ ಸಹಾಯ ಮಾಡಿದ ಅಡುಗುದಾನ ಕಟ್ಟಡಗಳು ಜಿಲ್ಲೆಯಲ್ಲಿವೆ. ಆಧುನಿಕತೆಗೆ ವಾಲಿದರೂ ಅವುಗಳಲ್ಲಿ ಐತಿಹಾಸಿಕತೆ ಕುರುಹು ಸ್ವಲ್ಪ ಮಟ್ಟಿಗಾದರೂ ಉಳಿದಿದೆ, ಸಾಕಷ್ಟು ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಇತಿಹಾಸ ದಾಖಲಿಸುವ ನಮ್ಮ ಪ್ರಯತ್ನ ಪೂರ್ಣಗೊಂಡಿಲ್ಲ. ಈ ಕುರಿತು ಜಿಲ್ಲಾಡಳಿತ ಮುತುವರ್ಜಿ ವಹಿಸಿದ್ದು, ಜಿಲ್ಲೆಯ ನಮಗೆಲ್ಲ ಹೆಮ್ಮೆ ಮೂಡಿಸಿದೆ ಎಂದರು.
ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಮಾತನಾಡಿ, ಇಲಾಖೆಯಿಂದ ವಿಶೇಷ ವಸ್ತು ಮತ್ತು ಛಾಯಾಚಿತ್ರ ಪ್ರದರ್ಶನ ಏರಿ್ಡಸಿ, ಜನರಿಗೆ ಧಾರವಾಡ ಜಿಲ್ಲೆಯ ಇತಿಹಾಸ ಪರಿಚಯಿಸಲಾಗುವುದು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ವಿವಿಧ ಶಾಲಾ ಮಕ್ಕಳಿಂದ ಸ್ವಾತಂತ್ರ್ಯ ಸಂಗ್ರಾಮದ ಕುರಿತು ವಿಶೇಷ ರೂಪಕ ಪ್ರದರ್ಶಿಸಲಾಗುವುದು ಮತ್ತು ಮೊರಬ, ಉಪ್ಪಿನಬೆಟ್ಟಗೇರಿ, ಹೆಬ್ಬಳ್ಳಿ, ಅದರಗುಂಚಿ ಗ್ರಾಮಗಳಲ್ಲಿ ಸ್ವಾತಂತ್ರ್ಯ ಹೊರಾಟಗಾರರ ಕುರುಹುಗಳಿವೆ. ಅವುಗಳ ಬಗ್ಗೆ ಜಿಲ್ಲೆಯ ಜನರಿಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಕವಿವಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವಿ.ಎಲ್.ಪಾಟೀಲ ಮಾತನಾಡಿ, ಗ್ರಾಮ ಮಟ್ಟದಲ್ಲಿ ಆಯಾ ಹಳ್ಳಿಯ ಹೋರಾಟಗಾರರನ್ನು ಅಲ್ಲಿಯೇ ಗುರುತಿಸುವಂತೆ ಆಗಬೇಕು. ಹೋರಾಟಗಾರರ ಕುರಿತು ಕಿರು ಪುಸ್ತಕಗಳನ್ನು ಪ್ರಕಟಿಸಬೇಕು. ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ ಎಂದರು.
ಸಭೆಯಲ್ಲಿ ವಿಶ್ರಾಂತ ಪ್ರಾಧ್ಯಾಪಕ, ಸಂಶೋಧಕ ಪ್ರೋ ಜೆ.ಎಂ.ನಾಗಯ್ಯ, ಕವಿವಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಾರುತಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ದೀಪಕ ಮಡಿವಾಳರ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಪ್ರಕಾಶ ಹೊಸಮನಿ, ಪದವಿ ಪೂರ್ವ ಶೀಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಕೆ.ಪಿ., ಜಾನಪದ ತಜ್ಞ ಡಾ.ರಾಮೂ ಮೂಲಗಿ, ಜಾನಪದ ಸಂಶೋಧನ ಸಂಸ್ಥೆಯ ವಿಶ್ವೇಶ್ವರಿ ಹಿರೇಮಠ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಾಂದಗಿ ಉದಯ ಯಂಡಿಗೇರಿ ಸೇರಿದಂತೆ ರೋಟರಿ, ಲೈನ್ಸ್ ಸಂಸ್ಥೆಯ ಪ್ರತಿನಿಧಿಗಳು ಮಾತನಾಡಿದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್, ತಹಶೀಲ್ದಾರ ಡಾ. ಡಿ.ಎಚ್.ಹೂಗಾರ ಇದ್ದರು. ಕನ್ನಡ ಮತ್ತು ಸಂಸಕ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೆರಿ ಸ್ವಾಗತಿಸಿದರು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ವಂದಿಸಿದರು.
ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳ ಸದಸ್ಯರು, ಸಂಶೋಧಕರು ಸಭೆಯಲ್ಲಿ ಉಪಸ್ಥಿತರಿದ್ದರು.