ಗುಳೇದಗುಡ್ಡದಲ್ಲಿ ಕಾಮದಹನಕ್ಕೆ ಸಿದ್ದತೆ
ಗುಳೇದಗುಡ್ಡ 27: ಕಾಮದಹನದ ದಿನ ಕಟ್ಟಿಗೆ, ಜೋಳದ ದಂಟು ಹಾಗೂ ಗೋಣಿ ಚೀಲಗಳನ್ನು ಬಳಸಿ ಹತ್ತಾರು ಅಡಿ ಎತ್ತರದಲ್ಲಿ ಕಾಮನ ಪ್ರತಿಕೃತಿ ಮಾಡುತ್ತಾರೆ. ಅದನ್ನು ದಹನದ ಸ್ಥಳದಲ್ಲಿ ನಿಲ್ಲಿಸುತ್ತಾರೆ. ರಾತ್ರಿ ಸುಮಾರು 10 ಗಂಟೆಗೆ ಅದನ್ನು ಹಾಗೂ ಅದರ ಸುತ್ತಲೂ ಹರವಿದ ಕಟ್ಟಿಗೆಗೆ ಬೆಂಕಿ ಹಚ್ಚಿ ಕಾಮದಹನ ಮಾಡುತ್ತಾರೆ. ಯುವಕರು ಬೊಬ್ಬೆ ಹಾಕಿ ಹಲಿಗೆ ಬಾರಿಸುತ್ತ, ಕಾಮದಹನ ಪ್ರಸಂಗದಲ್ಲಿ ಖುಷಿ ಪಡುತ್ತಾರೆ.
ಪಟ್ಟಣದ ಹರದೊಳ್ಳಿ, ಸಾಲೇಶ್ವರ ಗುಡಿ ಹತ್ತಿರ, ಶಕ್ತಿ ಟಾಕೀಜ ಕ್ರಾಸ್, ಶಿಕ್ಷಕರ ನಗರ, ಭಂಡಾರಿ ಕಾಲೇಜ ಕ್ರಾಸ್, ಪವಾರ ಕ್ರಾಸ್ ಹತ್ತಿರ, ಬನ್ನಿಕಟ್ಟಿ ಹತ್ತಿರ, ಕಲಾಲ ಓಣಿ, ನಾಡಕಚೇರಿ ಎದುರಿಗೆ, ಭಾರತ ಮಾರ್ಕೆಟ್, ಹಾದಿ ಬಸವೇಶ್ವರ ದೇವಸ್ಥಾನದ ಹತ್ತಿರ, ಗಚ್ಚಿನಕಟ್ಟಿ ಹತ್ತಿರ, ತಿಪ್ಪಾ ಪೇಟೆ, ಕಂಠಿಪೇಟೆ, ಹೀಗೆ ಪಟ್ಟಣದ ಸುಮಾರು 30 ರಿಂದ 35 ಕಡೆಗಳಲ್ಲಿ ಕಾಮದಹನ ಪದ್ಧತಿ ನಡೆಯುತ್ತದೆ.
ಕೆಟ್ಟದ್ದನ್ನು ಸುಡುವುದು, ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು, ಅಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಆಚರಿಸುವ ಒಂದು ಪರಂಪರೆ ಇದೆ. ಇಂತಹದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮದಹನಕ್ಕೆ ಪಟ್ಟಣದ ವಿವಿಧ ಸ್ಥಳಗಳಲ್ಲಿ ಭರದ ಸಿದ್ಧತೆ ಶನಿವಾರ ಬೆಳಗಿನಿಂದ ನಡೆದಿದೆ.
ಮೊದಲೆಲ್ಲ ಕಟ್ಟಿಗೆ, ಕುಳ್ಳು ಕದ್ದು ತಂದು ಕಾಮದಹನ ಮಾಡಲಾಗುತ್ತಿತ್ತು. ಆದರೆ ಈಗ ಅದು ಇಲ್ಲ. ಕದ್ದು ತರುವುದು ಸರಿಯಲ್ಲ ಎಂಬ ಸ್ವಾಭಿಮಾನ ಯುವಕರಲ್ಲಿ ಬಂದಿದೆ. ಬದಲಾಗಿ ಓಣಿಯಲ್ಲಿ ಮನೆಮನೆಗೆ ಪಟ್ಟಿ ಹಾಕಿ ಹಣ ಸಂಗ್ರಹಿಸಿ ಕಟ್ಟಿಗೆ ಖರೀದಿಸಿ ತರಲಾಗುತ್ತದೆ. ಕಾಮಣ್ಣನ್ನು ಶನಿವಾರ ರಾತ್ರಿ ಸುಡಲು ಪಟ್ಟಣದ ಹಲವು ಪ್ರಮುಖ ಓಣಿಗಳಲ್ಲಿ ಯುವಕರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಸಮೀಪದ ಕಟಗಿ ಅಡ್ಡೆಗಳಿಗೆ ಓಣಿಯ ಯುವಕರು ಹಲಿಗೆ ಬಾರಿಸುತ್ತ ಹೋಗಿ ಕಟ್ಟಿಗೆಯನ್ನು ಅಡ್ಡೆ ಮಾಲಿಕರಿಂದ ಪುಕ್ಕಟೆಯಾಗಿ ಕೇಳಿ ತರುತ್ತಿದ್ದಾರೆ. ಹೆಚ್ಚಿಗೆ ಬೇಕಿದ್ದಾಗ ಕಟ್ಟಿಗೆ ಖರೀದಿ ಸಹ ಮಾಡುತ್ತಿದ್ದಾರೆ ಎಂದು ಹಿರಿಯರಾದ ಪ್ರಕಾಶ ಮುರಗೋಡ ಹೇಳುತ್ತಾರೆ.
ಓಣಿಯಲ್ಲಿನ ಪ್ರತಿ ಮನೆಮನೆಗೆ ಈ ಹಿಂದೆ ಯುವಕರು ಹೋಗಿ ಕಟ್ಟಿಗೆ ಹಾಗೂ ಕುಳ್ಳು ಪಡೆದು ಕಾಮದಹನ ಮಾಡುತ್ತಿದ್ದರು. ಆದರೆ ಈಗ ಗ್ಯಾಸ್ ಸಿಲೆಂಡರ್ ಬಳಕೆ ಹೆಚ್ಚಾಗಿದ್ದರಿಂದ ನಗರದ ಯಾರ ಮನೆಗಳಲ್ಲಿಯೂ ಕಟ್ಟಿಗೆ, ಕುಳ್ಳು ಸಿಗುತ್ತಿಲ್ಲ.ಹೀಗಾಗಿ ಯುವಕರು ಮನೆಮನೆಗೆ ತೆರಳಿ ಪಟ್ಟಿ ಹಾಕಿ ಹಣ ಸಂಗ್ರಹಿಸಿ ತಂದು ಆ ಹಣದಿಂದ ಕಟ್ಟಿಗೆ ಖರೀದಿಸಿ ಕಾಮದಹನ ಮಾಡುವ ವಿನೂತನ ಪದ್ಧತಿ ಇಲ್ಲಿ ಕಂಡು ಬರುತ್ತಿದೆ.
ರಾತ್ರಿ ಕಾಮದಹನ ನಡೆಯುತ್ತಿದ್ದಂತೆ ಅದರಲ್ಲಿಯ ಬೆಂಕಿ ತಂದು ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ಅದೇ ಬೆಂಕಿಯಲ್ಲಿ ಕಡಲೆ ಹುರಿದು ಹೋಗಿ ಬರುವ ಜನರಿಗೆ ಹುರಿದ ಕಡಲೆ ಕೊಟ್ಟು ತಾವೂ ತಿನ್ನುತ್ತಾರೆ. ಕಾಮದಹನದ ಮರುದಿನ ಬೆಳಿಗ್ಗೆ ಅಲ್ಲಿಯ ಬೆಂಕಿ ಮನೆಗೆ ತಂದು ಒಲೆಗೆ ಹಾಕಿ ಒಲೆ ಹೊತ್ತಿಸುವ ಪದ್ದತಿ ಇಂದಿಗೂ ಒಲೆ ಇದ್ದವರ ಮನೆಗಳಲ್ಲಿ ಕಂಡು ಬರುತ್ತದೆ.