ಕಾಗವಾಡ

ಪ್ರವಾಹ ಎದುರಿಸಲು ತಾಲೂಕಾಡಳಿತದಿಂದ ಸಕಲ ಸಿದ್ಧತೆ

ಪ್ರವಾಹ ಎದುರಿಸಲು ತಾಲೂಕಾಡಳಿತದಿಂದ ಸಕಲ ಸಿದ್ಧತೆ
ಕಾಗವಾಡ ಪ್ರವಾಸಿ ಮಂದಿರದಲ್ಲಿ ನೆರೆ ಹಾವಳಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸುತ್ತಿರುವ ಸಚಿವ ಶ್ರೀಮಂತ ಪಾಟೀಲರು.

ಸಚಿವ ಶ್ರೀಮಂತ ಪಾಟೀಲ ಹೇಳಿಕೆ: ಕಾಗವಾಡ ತಾಲೂಕಾಧಿಕಾರಿಗಳ ನೆರೆಹಾವಳಿ ಪೂರ್ವಭಾವಿ ಸಭೆ 

ಶೇಡಬಾಳ 19: ಪ್ರವಾಹ ಎದುರಿಸಲು ಕಾಗವಾಡ ತಾಲೂಕಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದರು.  

ಅವರು ಶುಕ್ರವಾರ ದಿ. 18 ರಂದು ಸಾಯಂಕಾಲ ಕಾಗವಾಡ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ, ಕಾಗವಾಡ ತಾಲೂಕಾ ಅಧಿಕಾರಿಗಳ ನೆರೆಹಾವಳಿ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಮಹಾರಾಷ್ಟ್ರ ರಾಜ್ಯದ ಘಟ್ಟ ಪ್ರದೇಶಗಳಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಮಹಾಪೂರ ಬರುವ ಸಾಧ್ಯತೆ ಇದೆ. ನೆರೆಹಾವಳಿಗೆ ತುತ್ತಾಗಲಿರುವ ಕಾಗವಾಡ ತಾಲೂಕಿನ ಗ್ರಾಮಗಳ ಜನರ ಹಾಗೂ ಜಾನುವಾರುಗಳ ಸುರಕ್ಷಿತೆಗಾಗಿ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.  

ಕಾಗವಾಡ ತಾಲೂಕಿನ ಕೃಷ್ಣಾ ನದಿ ತೀರದಲ್ಲಿರುವ ಗ್ರಾಮಗಳ ಸುರಕ್ಷತೆಗಾಗಿ ಸರ್ಕಾರವು ಸಕಲ ರೀತಿಯಲ್ಲಿ ಸನ್ನದ್ಧವಾಗಿದ್ದು, ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಿ ಜನ, ಜಾನುವಾರುಗಳಿಗೆ ಯಾವುದೇ ತೊಂದರೆಯಾಗದಂತೆ ಕಾಳಜಿ ವಹಿಸಿ ಎಂದು ಹೇಳಿದರು.  

ತಾಲೂಕಾ ದಂಡಾಧಿಕಾರಿ ಪರಿಮಳಾ ದೇಶಪಾಂಡೆ ಮಾತನಾಡಿ ಕಾಗವಾಡ ತಾಲೂಕಿನ 14 ಗ್ರಾಮಗಳು ಕೃಷ್ಣಾ ನದಿ ನೆರೆ ಹಾವಳಿಗೆ ಒಳಗಾಗಲಿದ್ದು, ಅವುಗಳಲ್ಲಿ ಜುಗೂಳ, ಮಂಗಾವತಿ, ಶಹಾಪೂರ, ಕುಸನಾಳ, ಮೋಳವಾಡ, ಕೃಷ್ಣಾ ಕಿತ್ತೂರ, ಬಣಜವಾಡ, ಕಾತ್ರಾಳ ಹೀಗೆ 8 ಗ್ರಾಮಗಳು ಮುಳುಗಡೆ ಹೊಂದುತ್ತವೆ. 6 ಗ್ರಾಮಗಳು ಭಾಗಶಃ ತೊಂದರೆಗೆ ಒಳಗಾಗಲಿವೆ. 

ಈಗಾಗಲೇ ಕಾಗವಾಡ ತಾಲೂಕಿನಲ್ಲಿ 14 ಬೋಟ್‌ಗಳಿದ್ದು, 8 ಬೋಟ್‌ಗಳು ಚಾಲ್ತಿಯಲ್ಲಿವೆ. 6 ಬೋಟ್‌ಗಳನ್ನು ದುರಸ್ತಿ ಮಾಡಬೇಕಾಗಿದೆ. ಇನ್ನು 8 ಬೋಟ್‌ಗಳ ಅವಶ್ಯಕತೆ ಇದೆ. ಅದರಂತೆ 200 ರಷ್ಟು ಲಾಯಿಫ್ ಜಾಕೇಟ್‌ಗಳು, 40 ನಿರಾಶ್ರಿತ ಕೇಂದ್ರಗಳನ್ನು ಪ್ರಾರಂಭಿಸಬೇಕಾಗುತ್ತದೆ ಎಂದು ಸಚಿವರಿಗೆ ವಿವರಿಸಿದರು. ತಾಲೂಕಿನಲ್ಲಿ ಮಹಾಪೂರದಿಂದ ಎಂಥಹ ಪರಿಸ್ಥಿತಿ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ತಾಲೂಕಾಡಳಿತ ಸನ್ನದ್ಧವಾಗಿದೆ ಎಂದು ಹೇಳಿದರು. 

ಆಯಾ ಇಲಾಖೆಯ ಅಧಿಕಾರಿಗಳು ತಾವೂ ಕೈಗೊಂಡ ಮುಂಜಾಗೃತ ಕಾರ್ಯಗಳ ಬಗ್ಗೆ ಸಚಿವರಿಗೆ ವಿವರಿಸಿದರು.  

ನೆರೆ ಹಾವಳಿಯ ನೊಡೆಲ್ ಅಧಿಕಾರಿ, ತಾಲೂಕಾ ದಂಡಾಧಿಕಾರಿ ಪರಿಮಳಾ ದೇಶಪಾಂಡೆ, ಅಧಿಕಾರಿಗಳಾದ ಈರನಗೌಡ ಏಗನಗೌಡರ, ಕೆ. ರವಿ, ಜೆ.ಎ.ಹಿರೇಮಠ, ವೀರಣ್ಣ ವಾಲಿ, ಎಂ.ಆರ್‌.ಮುಂಜೆ, ಸಂಜೀವ ಸದಲಗಿ, ಪ್ರವೀಣ ಹುಣಸಿಕಟ್ಟಿ, ವೃಷಭ ಗಣೆ, ಬಸವರಾಜ ಬೋರಗಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. 

ಸುದ್ದಿ ಓದಿ