ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೈಹಿಕ ಶಿಕ್ಷಣಕ್ಕೆ ಆದ್ಯತೆ: ಅರುಣ ಶಹಾಪುರ
ಸಿಂದಗಿ 2: ದೈಹಿಕ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂದರ್ಭ ಎಲ್ಲ ವಿಷಯಗಳಿಗೆ ಜೊತೆಗೆ ದೈಹಿಕ ಶಿಕ್ಷಣಕ್ಕೂ ಮಾನ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.
ಪಟ್ಟಣದ ಮಾಂಗಲ್ಯ ಭವನದಲ್ಲಿ ವಿಶ್ರಾಂತ ಶಿಕ್ಷಕ ಎಸ್.ಎಸ್.ಮಲ್ಲೇದ ಗುರುಗಳ ಷಷ್ಟಿಪೂರ್ತಿ ಹಾಗೂ ಶಿಶ್ಯ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ರಮೇಶ ಬಿರಾದಾರ ಅವರ ದೈಹಿಕ ಸಾಹಿತ್ಯ ಸಂಪದ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭ ಉದ್ಘಾಟಿಸಿದ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ತನ್ನ ಜ್ಞಾನವನ್ನು ಶಿಶ್ಯರಿಗೆ ಧಾರೆಯೆರೆದು ಗೌರವ ಸಮರ್ಪಿಸಿಕೊಳ್ಳುವ ಸಾರ್ಥಕ ಬದುಕು ಮಲ್ಲೇದ ಗುರುಗಳಿಗೆ ಲಭಿಸಿರುವುದು ಅವರ ಅದೃಷ್ಟ ಎಂದು ಬಣ್ಣಿಸಿದರು.
ರಮೇಶ ಬಿರಾದಾರ ರಚಿಸಿದ ದೈಹಿಕ ಶಿಕ್ಷಣ ಸಾಹಿತ್ಯ ಸಂಪದ ಗ್ರಂಥವನ್ನು ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಲೋಕಾರ್ಪಣೆಗೊಳಿಸಿದರು.
ಮಾಜಿ ಶಾಸಕರಾದ ರಮೇಶ ಭೂಸನೂರ, ಶರಣಪ್ಪ ಸುಣಗಾರ, ಪಟ್ಟಣದ ಸಾರಂಗಮಠ-ಗಚ್ಚಿನಮಠದ ಡಾ.ಪ್ರಭು ಸಾರಂಗದೇವ ಶ್ರೀಗಳು, ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎಸ್.ಎಸ್.ಮಲ್ಲೇದ ಗುರುಗಳಿಗೆ ಗಣ್ಯಾತಿಗಣ್ಯರೆಲ್ಲರೂ ಕೂಡಿ ಕಲ್ಲು ಸಕ್ಕರೆಯಿಂದ ತುಲಾಭಾರ ಸೇವೆ ನಡೆಸಿಕೊಟ್ಟರು.
ಎಸ್.ಎಸ್.ಮಲ್ಲೇದ ಗುರುಗಳು, ಅವರ ಧರ್ಮಪತ್ನಿ ಸುಜಾತಾ ಮಲ್ಲೇದ, ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಬಾಗಲಕೋಟ ಡಿಡಿಪಿಐ ಎಸ್.ಎಸ್.ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ನಗನೂರ, ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷ ಕುಮಾರ ಬೀಳಗಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎ.ಎಂ.ಬಿರಾದಾರ, ನಿವೃತ್ತ ಉಪನಿರ್ದೇಶಕ ಟಿ.ಎಚ್.ಮೇಲಿನಕೇರಿ, ಬೆಂಗಳೂರಿನ ಸುರಭಿ ಫೌಂಡೇಶನ್ ಟ್ರಸ್ಟ್ನ ನಿರ್ದೇಶಕ ಡಾ.ಎ.ಎಸ್.ಪಾಟೀಲ, ನಿವೃತ್ತ ದೈಹಿಕ ನಿರ್ದೇಶಕ ಕೆ.ಎಚ್.ಸೋಮಾಪೂರ, ಗಣ್ಯ ವರ್ತಕ ಬಸವರಾಜ ಅಂಬಲಗಿ, ಎ.ಬಿ.ಕವಲಗಿ ಸೇರಿದಂತೆ ಗಣ್ಯರು ವೇದಿಕೆ ಮೇಲಿದ್ದರು.
ಎಸ್.ಬಿ.ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ಹಾಡಿದರು. ಜಗದೀಶ ಸಿಂಗೆ, ಎಸ್.ಎಸ್.ಅಮೀನಭಾವಿ ಅವರುಗಳು ಸ್ವರಚಿತ ಗೀತೆಯನ್ನು ಹಾಡಿದರು. ಶಿಕ್ಷಕ ಸಂಗಮೇಶ ಮಲ್ಲೇದ ಸ್ವಾಗತಿಸಿದರು. ಜಗದೀಶ ಪಾಟೀಲ ನಿರೂಪಿಸಿದರು, ವಂದಿಸಿದರು.