ಮಹಿಳೆಯರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು; ರಶ್ಮಿ ನೂಲಾನವರ
ಸಿಂದಗಿ 16 : ವಿಶ್ವದಾದ್ಯಂತ ಕಂಡುಬರುವ ಲಿಂಗತಾರತಮ್ಯವನ್ನು ತೊಡೆದುಹಾಕುವುದು ಅಗತ್ಯವಾಗಿದೆ. ಅತ್ಯಾಚಾರ, ಶೋಷಣೆ ಹಾಗೂ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರ ರಕ್ಷಣೆಗೆ ಹಲವು ಕಾನೂನುಗಳಿದ್ದು, ಅವುಗಳ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸಬೇಕು. ಮಹಿಳೆಯರು ತಮ್ಮ ಹಕ್ಕುಗಳನ್ನು ಅರಿತು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ಸಮಾಜ ಕಾರ್ಯಕರ್ತೆ ರಶ್ಮಿ ನೂಲಾನವರ ಹೇಳಿದರು.
ಸಿಂದಗಿ ಮತಕ್ಷೇತ್ರದ ಕೊರಳ್ಳಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶ್ರೀ ಶ್ರೀಧರ ಸ್ವಾಮಿ ವಿದ್ಯಾವರ್ಧಕ ಸಂಘ (ರಿ.), ವಿಜಯಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಿಂದಗಿ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನಾಗರಿಕತೆಯ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶತಮಾನಗಳಿಂದ ಸಾಮಾಜಿಕ ಮೌಢ್ಯ ಹಾಗೂ ಅನಿಷ್ಟ ಸಂಪ್ರದಾಯಗಳಿಗೆ ಬಲಿಯಾಗುತ್ತಿರುವ ಮಹಿಳೆಯರು ಪುರುಷಪ್ರಧಾನ ವ್ಯವಸ್ಥೆಯ ಸಂಕೋಲೆಗಳಿಂದ ಹೊರಬಂದು ಸಮಾಜದ ಮುಖ್ಯವಾಹಿನಿಗೆ ಬರಲು ಹೋರಾಡುತ್ತಿದ್ದಾರೆ.
ಮಹಿಳೆಯರ ಮೇಲಿನ ಶೋಷಣೆ ತಡೆಯಲು ಅವರನ್ನು ನೋಡುವ ಸಮಾಜದ ದೃಷ್ಟಿಕೋನ ಬದಲಾಗಬೇಕು. ಮಹಿಳೆಯರ ಸುರಕ್ಷತೆ, ಸ್ವಾಭಿಮಾನ ಹಾಗೂ ಸಮಾನ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ. ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಸಮಾಜ ಕಾರ್ಯಕರ್ತೆ ವಿದ್ಯಾ ದೇಸಾಯಿ, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಸುವರ್ಣ ಹೊನ್ನಳ್ಳಿ, ದಾನೇಶ್ವರಿ ಸಂಘದ ಸೇವಾ ಪ್ರತಿನಿಧಿ ಜಯಾ ಹಿರೇಮಠ, ಸಂಘದ ಸದಸ್ಯರಾದ ಸಾವಿತ್ರಿ ಹಿರೇಮಠ, ಮಲ್ಲಮ್ಮ ಶುಂಠಿ, ಅಶ್ವಿನಿ ವಾಲಿಕಾರ, ಶ್ರೀದೇವಿ ನಾಟಿಕಾರ, ಶಶಿಕಲಾ ಪತ್ತಾರ, ಮಾನಂದ ಹೊಸಮನಿ, ತನುಶ್ರೀ ಮ್ಯಾಗೇರಿ ಸೇರಿದಂತೆ ಗ್ರಾಮಸ್ಥರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.