ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆ
ಲೋಕದರ್ಶನ ವರದಿ,
ಜಮಖಂಡಿ12: ಗಣರಾಜ್ಯೋತ್ಸವ ಸಂಭ್ರಮದಿಂದ ಅರ್ಥಪೂರ್ಣವಾಗಿ ಅದ್ಧೂರಿಯಾಗಿ ಆಚರಿಸಲು ತಾಲೂಕಾಡಳಿತ ಎಲ್ಲ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಕರೆ ನೀಡಿದರು.
ತಾಲೂಕಾ ಆಡಳಿತ ಸೌಧ ಕಛೇರಿ ಸಭಾಭವನದಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜ.26ರಂದು ಸರಕಾರಿ ಇಲಾಖೆಗಳಲ್ಲಿ ಬೆಳಿಗ್ಗೆ 7-45 ಗಂಟೆಗೆ ಧ್ವಜಾರೋಹಣ ನಂತರ 9 ಗಂಟೆಗೆ ತಾಲೂಕಾ ಕ್ರೀಡಾಂಗಣದಲ್ಲಿ ಸಾಮೂಹಿಕ ಧ್ವಜಾರೋಹಣ ನಡೆಯಲಿದೆ. ನಗರಸಭೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಸಹಿತ ಎಲ್ಲ ಇಲಾಖೆಗಳಿಗೆ ಸೂಚಿಸಿರುವ ಕೆಲಸವನ್ನು ಸಮರ್ಪಕವಾಗಿ, ನಿಗದಿತ ಅವಧಿಯಲ್ಲಿ ಪೂರ್ಣ ಗೊಳಿಸಬೇಕು ಎಂದರು.
ತಹಶೀಲ್ದಾರ ಸದಾಶಿವ ಮಕ್ಕೋಜಿ ಮಾತನಾಡಿ, ಗಣರಾಜ್ಯೋತ್ಸವ ಅದ್ಧೂರಿ ಆಚರಣೆಗೆ ಅಧಿಕಾರಿಗಳ ಹಾಜರಾತಿ ಕಡ್ಡಾಯವಾಗಿದೆ. ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಸೂಚಿಸಿರುವ ಕೆಲಸವನ್ನು ಸಕಾಲದಲ್ಲಿ ಪೂರ್ಣ ಮಾಡಬೇಕು. ತಾಲೂಕಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ, ಪಥಸಂಚಲನ, ಶಾಲಾ ಮಕ್ಕಳಿಂದ ಸಾಮೂಹಿಕ ಕವಾಯತ, ಸಾಧಕರಿಗೆ ಪ್ರಶಸ್ತಿ ವಿತರಣೆ ನಂತರ ವಿವಿಧ ಶಾಲೆಗಳ 12 ತಂಡಗಳಿಂದ ಸಾಮೂಹಿಕ ನೃತ್ಯ ಮನರಂಜನೆ ನಡೆಯಲಿದೆ ಎಂದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಿತ ಹಲವರು ಇದ್ದರು.