ಗರ್ಭಿಣಿಯರಿಗೆ ಮಕ್ಕಳಿಗೆ ಕಳಪೆ ಮಟ್ಟದ ಮೊಟ್ಟೆ ವಿತರಣೆ
ರಾಣಿಬೆನ್ನೂರ25 :ತಾಲೂಕಿನ ನೂಕಾಪುರ ಪ್ಲಾಟ್ನ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಕಳಪೆ ಮಟ್ಟದ ಮೊಟ್ಟೆ ಕಂಡು ಬಂದಿವೆ. ಅಡುಗೆಯವರು ಮೊಟ್ಟೆಯನ್ನು ಬೀಯಿಸಿದಾಗ ಮೊಟ್ಟೆ ಕೆಟ್ಟಿರುವುದು ಕಂಡು ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಪೌಷ್ಠಿಕತೆಗೆ ಸಹಾಯವಾಗಬೇಕಾದ ಮೊಟ್ಟೆ ಇದೀಗ ಮಕ್ಕಳು ಮತ್ತು ಗರ್ಭಿಣಿಯರ ಆರೋಗ್ಯಕ್ಕೆ ಕುತ್ತು ತರುತ್ತಿದೆ.
ನೂಕಾಪುರ ಗ್ರಾಮದಲ್ಲಿ 2, ಪ್ಲಾಟ್ನಲ್ಲಿ 1 ಮತ್ತು ತಾಂಡಾದಲ್ಲಿ 2 ಸೇರಿ ಒಟ್ಟು 5 ಅಂಗನವಾಡಿ ಕೇಂದ್ರಗಳಿವೆ. ಬುಧವಾರ ನೂಕಾಪುರ ಪ್ಲಾಟ್ನ ಅಂಗನವಾಡಿ ಕೇಂದ್ರದಲ್ಲಿ ಕಳಪೆ ಮೊಟ್ಟೆ ಕಂಡು ಬಂದಿವೆ. ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ವಿತರಿಸಲು ರಾಜ್ಯದ ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿರುವ ಮೊಟ್ಟೆಗಳು ಕಳಪೆಯಾಗಿವೆ. ಮೊಟ್ಟೆ ಬೇಯಿಸಿ ಸಿಪ್ಪೆ ಬಿಡಿಸಿದಾಗ ಮೊಟ್ಟೆ ಕಪ್ಪು ಬಣ್ಣಕ್ಕೆ ತಿರುಗಿದ್ದು, ಕೊಳೆತ ವಾಸನೆ ಬರುತ್ತಿದೆ. ಗುತ್ತಿಗೆದಾರರಿಂದ ಕಳಪೆ ಮೊಟ್ಟೆ ವಿತರಣೆಯಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪಪರಿಣಾಮ ಬೀರಲಿದೆ ಎಂದು ಗ್ರಾಮಸ್ಥರು ದೂರಿದರು.
ನೂಕಾಪುರ ಗ್ರಾಮದಲ್ಲಿ ಎಲ್ಲರೂ ಬಡವರು, ಕಟ್ಟಡ ಕಾರ್ಮಿಕರು, ರೈತರು, ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಕೆಲಸಕ್ಕೆ ಹೋದಾಗ ಅಂಗನವಾಡಿ ಕೇಂದ್ರಕ್ಕೆ ಶಾಲೆಗೆ ಮಕ್ಕಳನ್ನು ಕಳಿಸಿತ್ತಾರೆ. ಕಳಪೆ ಮೊಟ್ಟೆ ಪೂರೈಕೆ ಮಾಡಿದವರನ್ನು ಕಪ್ಪು ಪಟ್ಟಿಗೆ ಸೇರಿಸಿಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಅಧಿಕಾರಿಗಳಿಗೆ ಸೂಚಿಸಿದರೂ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಇನ್ನು ಕಳಪೆ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಎಂದು ನೂಕಾಪುರದ ಹನುಮಂತ ಚವ್ವಾಣ ದೂರಿದರು.
ಸಿಡಿಪಿಓ ಪಾರ್ವತಿ ಹುಂಡೇಕಾರ ಅವರು ಮಾತನಾಡಿ, ಈಗಾಗಲೇ ಪೂರೈಕೆಯಾದ ಮೊಟ್ಟೆಗಳನ್ನು ವಿತರಣೆ ಮಾಡಬಾರದು ಎಂದು ಎಲ್ಲ ಕೇಂದ್ರಗಳಿಗೆ ಸೂಚಿಸಲಾಗಿದೆ. ಗುತ್ತಿಗೆದಾರರಿಗೆ ಬೇರೆ ಮೊಟ್ಟೆಗಳನ್ನು ಪೂರೈಕೆ ಮಾಡಲು ಆದೇಶಿಸಲಾಗಿದೆ. ನೂಕಾಪುರ ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಬುಧವಾರ ಸಿಡಿಪಿಓ ಕಚೇರಿಯಲ್ಲಿ ನಡೆದ ಸಭೆಗೆ ಹಾಜರಾಗಿದ್ದರು. ಅಡುಗೆ ಸಹಾಯಕರಿಂದ ಈ ಪ್ರಮಾದ ನಡೆದಿದೆ. ತಾಲ್ಲೂಕಿನ ಎರಡು ವೃತ್ತಗಳಲ್ಲಿ ಬೇರೆ ಮೊಟ್ಟೆಗಳನ್ನು ಗುತ್ತಿಗೆದಾರರು ಪೂರೈಸಿದ್ದು, ಕೆಲವೇ ದಿನಗಳಲ್ಲಿ ಎಲ್ಲ ಕೇಂದ್ರಗಳಿಗೆ ಬೇರೆ ಮೊಟ್ಟೆ ಪೂರೈಸಲಾಗುವುದು ಎಂದರು.