ಧಾರವಾಡ - ಹುಬ್ಬಳ್ಳಿ

ಮುಖ್ಯಮಂತ್ರಿ ಜನಪ್ರೀಯತೆ ಸಹಿಸದೇ ವಿರೋಧ ಪಕ್ಷಗಳ ರಾಜಕೀಯ ಸಂಚು : ಕೋನರಡ್ಡಿ

ಮುಖ್ಯಮಂತ್ರಿ ಜನಪ್ರೀಯತೆ ಸಹಿಸದೇ ವಿರೋಧ ಪಕ್ಷಗಳ ರಾಜಕೀಯ ಸಂಚು : ಕೋನರಡ್ಡಿ

ಹುಬ್ಬಳ್ಳಿ 26: ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯಾವುದೇ ಪಾತ್ರವಿಲ್ಲದಿದ್ದರೂ ಪ್ರತಿಪಕ್ಷಗಳು ಇಲ್ಲ ಸಲ್ಲದ ಆರೋಪ ಮಾಡುತ್ತಾ ಅವರ ಜನಪ್ರೀಯತೆ ಸಹಿಸದೇ ಅವರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಕೆಪಿಸಿಸಿ ಮುಖ್ಯ ವಕ್ತಾರ ಎನ್‌.ಹೆಚ್‌. ಕೋನರಡ್ಡಿ ಪ್ರತಿಕ್ರೀಯಿಸಿದ್ದಾರೆ.  

ಉಚ್ಛ ನ್ಯಾಯಾಲಯ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಮಾಡಿದ ನಂತರ ಮುಖ್ಯಮಂತ್ರಿಗಳು ತನಿಖೆಯನ್ನು ಎದುರಿಸಲು ಸಿದ್ಧ ಎಂದು ಹೇಳಿದ ನಂತರ ವಿರೋಧ ಪಕ್ಷಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡುವುದೇ ಒಂದು ದೊಡ್ಡ ಕೆಲಸ ಎಂದು ತಿಳಿದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4 ದಶಕಗಳ ರಾಜಕೀಯ ಬದುಕಿನಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಸೇವೆ ಸಲ್ಲಿಸಿದ್ದಾರೆ. ಅವರು ಎಲ್ಲ ಸಮಾಜದ ಬಡವರ ಮತ್ತು ಶೋಷಿತರ ನಿಲುವನ್ನು ಸಹಿಸಲಾಗದೇ ಇಂತಹ ಪಿತೂರಿ ನಡೆಸಿ ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸುವ ಹುನ್ನಾರ ಬಿಜೆಪಿ ಅವರದ್ದಾಗಿದೆ.  

ಇದರಿಂದ ಮುಖ್ಯಮಂತ್ರಿಗಳಿಗೆ 136 ಶಾಸಕರ ಬೆಂಬಲವಿದ್ದು ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ ಅವರು ಅವರ ಬೆಂಬಲಕ್ಕೆ ಬಂಡೆಯಂತೆ ನಿಂತು ವಿರೋಧ ಪಕ್ಷದ ಆರೋಪಗಳನ್ನು ಎದುರಿಸುತ್ತೇವೆ ಎಂದು ಈಗಾಗಲೇ ಹೇಳಿಕೆ ನೀಡಿರುವುದು ಬಿಜೆಪಿ ಅವರಿಗೆ ಸಹಿಸಲಾಗುತ್ತಿಲ್ಲ. ಬಿಜೆಪಿ ಅವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ, ರೈತರ ಬೆಳೆ ಪರಿಹಾರ, ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆ ಸರಿಯಾಗಿ ಬರುತ್ತಿಲ್ಲ. ರಾಜ್ಯದ ಜ್ವಲಂತ ಸಮಸ್ಯೆಗಳಾದ ಕೃಷ್ಣಾ ಮತ್ತು ಕಾವೇರಿ ಅಚ್ಚುಕಟ್ಟು ಪ್ರದೇಶದ ಮಹದಾಯಿ ಕಳಸಾ-ಬಂಡೂರಿ, ಮೇಕೆದಾಟು, ಭದ್ರಾ ಯೋಜನೆಗಳ ಜಾರಿಗೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಅನುಮತಿ ಕೊಡಿಸಲು ಬಿಜೆಪಿ ಅವರು ಪ್ರಯತ್ನಿಸದೇ ಕೇವಲ ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆ, ಆಪಾದನೆ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಕೋನರಡ್ಡಿ ಎಚ್ಚರಿಸಿದ್ದಾರೆ. 


ಸುದ್ದಿ ಓದಿ