ಗಣೇಶ ಹಬ್ಬದ ಪ್ರಯುಕ್ತ ಪೊಲೀಸ್ ಪಥ ಸಂಚಲನ
ಬಳ್ಳಾರಿ,: ಗಣೇಶ ಚತುರ್ಥಿ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರ ನೇತೃತ್ವದಲ್ಲಿ ಮಂಗಳವಾರ ಸಂಜೆ ನಗರದಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು. ನಗರದಲ್ಲಿ ಗೌರಿ ಗಣೇಶ ಹಬ್ಬವನ್ನು ಯಾವುದೇ ರೀತಿಯ ಅನಾಹುತಗಳು ಆಗದಂತೆ ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯಾಗಿ ನಗರದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ತಂಡವು ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು, ಗೌರಿ ಗಣೇಶ ಹಬ್ಬ ಆಚರಣೆ ಹಿನ್ನಲೆಯಲ್ಲಿ ನಗರದಲ್ಲಿ ಯಾವುದೇ ರೀತಿಯ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಗಣೇಶ ಮೂರ್ತಿಯನ್ನು ಬಿಡುವ ವೇಳೆ ಹಾಗೂ ಅದೇ ಸಂದರ್ಭದಲ್ಲಿ ನಡೆಸುವ ಮೆರವಣಿಗೆಗಳಲ್ಲಿಯೂ ಸಹ ಎಚ್ಚರಿಕೆ ವಹಿಸಬೇಕು ಎಂದರು. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಶಾಂತಿ ಕದಡುವ ಕೆಲಸವನ್ನು ಯಾರೇ ಮಾಡಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್ ಸೇರಿದಂತೆ ಡಿವೈಎಸ್ಪಿ, ಎಸ್ ಐ, ಎಎಸ್ ಐ ಹಾಗೂ ಬಳ್ಳಾರಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ, ಪೊಲೀಸ್ ತುಕುಡಿಗಳು ಒಟ್ಟು ನೂರಕ್ಕೂ ಅಧಿಕ ಪೊಲೀಸರು ಪಥಸಂಚನಲದಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಪಥ ಸಂಚಲನವು ಬಳ್ಳಾರಿ ನಗರದ ಹುಸೇನ್ ನಗರದಿಂದ ಆರಂಭವಾಗಿ, ರಾಯಲ್ ವೃತ್ತದ ಮೂಲಕ ಬೆಂಗಳೂರು ರಸ್ತೆ ಮಾರ್ಗವಾಗಿ ಮೋತಿ ವೃತ್ತದಿಂದ ಕೌಲ್ ಬಜಾರ್ 1ನೇ ಗೇಟ್ ನಿಂದ ಕೌಲ್ ಬಜಾರ್ ಪೊಲೀಸ್ ಠಾಣೆಗೆ ತಲುಪಿ ಮುಕ್ತಾಯಗೊಂಡಿತು.