ಸಮಾಜದ ಆಂತರಿಕ ಭದ್ರತೆ ಕಾಪಾಡುವ ಪೊಲೀಸರ ಕರ್ತವ್ಯನಿಷ್ಠೆ ಶ್ಲಾಘನೀಯ: ನ್ಯಾ.ಬಿ.ಜಿ.ರಮಾ
ಪೊಲೀಸ್ ಹುತ್ಮಾತರ ದಿನಾಚರಣೆ
ಧಾರವಾಡ ಅಕ್ಟೋಬರ್ 21: ಸಮಾಜದ ಆಂತರಿಕ ಭದ್ರತೆಯನ್ನು ಕಾಪಾಡುತ್ತಿರುವ ಮತ್ತು ಒತ್ತಡ ನಡುವೆಯೂ ಜನರ ಸುರಕ್ಷತೆಗೆಗಾಗಿ ಹಗಲಿರುಳೆನ್ನದೆ ಸೇವೆ ಸಲ್ಲಿಸುತ್ತಿರುವ ಪೊಲೀಸರ ಕರ್ತವ್ಯ ನಿಷ್ಠೆ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಾದ ಪೊಲೀಸ್‌ರ ಸ್ಮರಣೆಗಾಗಿ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ನಮನ ಸಲ್ಲಿಸಿ, ಮಾತನಾಡಿದರು.
ನಿತ್ಯ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಇಲಾಖೆ ಸಿಬ್ಬಂದಿ ತಮ್ಮ ಆರೋಗ್ಯ, ಕುಟುಂಬದ ಬಗ್ಗೆಯೂ ಗಮನಹರಿಸಬೇಕು. ಒಳ್ಳೆಯ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ದಿನನಿತ್ಯ ವ್ಯಾಯಾಮ, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಬಿ.ಜಿ.ರಮಾ ಅವರು ತಿಳಿಸಿದರು.
ಸಮಾಜದ ರಕ್ಷಣೆ, ಶಾಂತಿಗೆ ಶ್ರಮಿಸುವ ಪೊಲೀಸ್ ಇಲಾಖೆಯೊಂದಿಗೆ ಸಮಾಜದ ಎಲ್ಲರೂ ಇದ್ದಾರೆ. ಸಾರ್ವಜನಿಕರೊಂದಿಗೆ ಉತ್ತಮ ನಡುವಳಿಕೆಯಿಂದ ವರ್ತಿಸಿ, ಪೊಲೀಸರು ಸಾರ್ವಜನಿಕರ ವಿಶ್ವಾಸ ಗಳಿಸುವದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ಅಪರಾಧಿಗಳನ್ನು ಪತ್ತೆ ಮಾಡಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.
ಧಾರವಾಡ ಐಐಟಿ ಓಟರೀಚ್ ವಿಭಾಗದ ಡೀನ್‌ರಾದ ಪ್ರೊ.ಎಸ್.ಎಂ.ಶಿವಪ್ರಸಾದ ಅವರು ಮಾತನಾಡಿ, ರಾಷ್ಟದ ಗಡಿ ಕಾಯುವ ಯೋಧರು ಬಾಹ್ಯ ದುಷ್ಟ ಶಕ್ತಿಗಳಿಂದ ರಾಷ್ಟ್ರ ರಕ್ಷಿಸುವಂತೆ, ಪೊಲೀಸರು ರಾಷ್ಟ್ರದೊಳಗಿನ ದುಷ್ಟಶಕ್ತಿಗಳನ್ನು ಮಟ್ಟಹಾಕಿ, ಆಂತರಿಕ ಭಧ್ರತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.
ಸಮಾಜಘಾತುಕ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಕರ್ತವ್ಯ ಬದ್ಧತೆಯಿಂದ ಬಲಿದಾನದಂತಹ ಘಟನೆಗಳು ಜರುಗುತ್ತಿವೆ. ಬಲಿದಾನಗೈದ ಪೊಲೀಸರ ಶ್ರಮ ಸ್ಮರಿಸಬೇಕು ಎಂದು ಅವರು ಹೇಳಿದರು.
ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಅವರು ಮಾತನಾಡಿ, ಕರ್ತವ್ಯದ ಮೇಲೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿ ಅಧಿಕಾರಿಗಳನ್ನು ಸ್ಮರಿಸಿದರು. ಮತ್ತು ದೇಶಕ್ಕಾಗಿ ಹೋರಾಡುತ್ತಾ ವೀರ ಮರಣ ಹೊಂದಿದ್ದ ಪೊಲೀಸರ ಸ್ಮರಣೆಗಾಗಿ ಸ್ಮಾರಕವನ್ನು ಲಡಾಕ್‌ನ ಬಾಸಿ ಚೀನಾ ಭಾಗದಲ್ಲಿ ಸ್ಥಾಪಿಸಲಾಗಿದೆ. ಕರ್ತವ್ಯದಲ್ಲಿದ್ದಾಗ ಹುತಾತ್ಮರರಾದ ಪೊಲೀಸರನ್ನು ದೇಶದಾದ್ಯಂತ ಎಲ್ಲ ಘಟಕಗಳಲ್ಲಿ ಸ್ಮರಿಸಲಾಗುತ್ತಿದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಬರಮನಿ ವೇದಿಕೆಯಲ್ಲಿ ಇದ್ದರು. ಪೊಲೀಸ್ ಅಧಿಕಾರಿಗಳಾದ ಆನಂದಕುಮಾರ.ಬಿ. ಮತ್ತು ವಾಯ್.ಎಂ.ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಮೌನಾಚರಣೆ ಮಾಡಿ, ಶ್ರದ್ದಾಂಜಲಿ ಸಲ್ಲಿಸಲಾಯಿತು. ಅಧಿಕಾರಿಗಳು ಹಾಗೂ ಗಣ್ಯರುಗಳಿಂದ ಹುತಾತ್ಮರ ಪೊಲೀಸ್ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ, ಗೌರವ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಹುತಾತ್ಮ ಯೋಧ ಹುಚ್ಚೇಶ ಹನುಮಂತಪ್ಪ ಮಲ್ಲನ್ನವರ ತಂದೆ ಹನುಮಂತಪ್ಪ, ತಾಯಿ, ಸಹೋದರಿ ನಾಗರತ್ನಾ, ಅವರ ಚಿಕ್ಕಪ್ಪ ಹಾಗೂ ಹುತಾತ್ಮರಾದ ಪೊಲೀಸರ ಕುಟುಂಬ ಸದಸ್ಯರು, ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು, ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಅಧಿಕಾರಿಗಳು, ಪೊಲೀಸರು, ಸಾರ್ವಜನಿಕರು ಭಾಗವಹಿಸಿ, ಹುತಾತ್ಮ ಪೊಲೀಸ್ ಯೋಧರಿಗೆ ನಮನ ಸಲ್ಲಿಸಿದರು.