ಧಾರವಾಡ - ಹುಬ್ಬಳ್ಳಿ

ದೈಹಿಕ, ಮಾನಸಿಕ ಸದೃಢತೆ ಸಾಧನೆಗೆ ಪೂರಕ: ಡಾ. ಹೂಲಿಕಟ್ಟಿ

ದೈಹಿಕ, ಮಾನಸಿಕ ಸದೃಢತೆ ಸಾಧನೆಗೆ ಪೂರಕ: ಡಾ. ಹೂಲಿಕಟ್ಟಿ

ಧಾರವಾಡ 03: ಇಂದಿನ ಜೀವನ ಶೈಲಿಯಲ್ಲಿ ಶರೀರ ಸದೃಢವಾಗಿ ಹಾಗೂ ಮನಸ್ಸು ಶಾಂತವಾಗಿ, ನಿರ್ಮಲವಾಗಿರಲು ಯೋಗ ವಿದ್ಯೆಯಿಂದ ಮಾತ್ರ ಸಾಧ್ಯ. ಇಂತಹ ದೈಹಿಕ ಹಾಗೂ ಮಾನಸಿಕ ಸದೃಢತೆ ಸಾಧನೆಗೆ ಪೂರಕವಾಗಿದೆ ಎಂದು ಧಾರವಾಡ ಪರಮಹಂಸ ಯೋಗ ಪೀಠದ ಡಾ. ಶೋಭಾ ಹೂಲಿಕಟ್ಟಿ ಅಭಿಪ್ರಾಯಪಟ್ಟರು.  

ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ದಿನೇಶ ಮ. ಪರಡ್ಡಿ ಸ್ಮರಣಾರ್ಥ ದತ್ತಿ ಕಾರ್ಯಕ್ರಮದಲ್ಲಿ ‘ಜೀವನ ಧರ್ಮ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.  

ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ನಾವು ಸೇವಿಸುವ ಆಹಾರ ಹಾಗೂ ಇತರ ಪದಾರ್ಥಗಳೆಲ್ಲ ವಿಷಯುಕ್ತ ಹಾಗೂ ಕಲಬೆರಕೆಯಿಂದ ಕೂಡಿವೆ. ಇದರಿಂದ ದಿನಕ್ಕೊಂದು ಹೊಸ ರೋಗಗಳಿಗೆ ತುತ್ತಾಗುತ್ತಿರುವುದು ವಿಷಾದಕರ. ಹಿತ-ಮಿತ ಆಹಾರ, ವಿಹಾರದಿಂದ ಮನುಷ್ಯ ಆರೋಗ್ಯವಂತನಾಗಿ ಜೀವನ ಸಾಗಿಸಬಹುದು. ಆಹಾರವು ಒಂದು ಓಷಧಿ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ವಯೋಮಾನಕ್ಕೆ ತಕ್ಕಂತೆ ಆಹಾರ ಸೇವನೆ, ಯೋಗದಿಂದ ಮನುಷ್ಯ ನಿರೋಗಿಯಾಗಿ ಬಾಳಬಹುದು ಎಂದರು. 

ದೇಹ ಹಾಗೂ ಮನುಸ್ಸುಗಳ ನಡುವೆ ಸಮತೋಲನವನ್ನುಂಟು ಮಾಡಲು ಹಾಗೂ ಜೀವನ ಸಾರ್ಥಕಗೊಳಿಸಲು ಸತ್ಸಂಗ, ಸತ್ಕಾರ್ಯ, ಧ್ಯಾನ, ಸ್ನೇಹಿತರ ಜೊತೆ ಸೌಹಾರ್ಧಯುತವಾದ ಸಂಬಂಧ ಒಳ್ಳೆಯ ವಿಚಾರಗಳ ವಿನಿಮಯದ ತೃಪ್ತಿಕರ ಜೀವನದಿಂದ ಜೀವನ್ಮುಕ್ತಿ ಹೊಂದಲು ಸಾಧ್ಯ. ಇದುವೇ ನಿಜವಾದ ಜೀವನ ಧರ್ಮ. ಲೌಕಿಕ ವಿಧಾನದಲ್ಲಿ ಬದುಕುವುದೇ ‘ಜೀವನ ಧರ್ಮದ ತಿರುಳು’ ಎಂದು ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಮಾನಸಿಕ ನೆಮ್ಮದಿಗಾಗಿ ಇಂತಹ ಯುಕ್ತವಾದ ಜೀವನ, ಧರ್ಮಪಾಲನೆ ಮಾಡಿದರೆ ಜೀವನಕ್ಕೊಂದು ಬೆಲೆ ಬರುವುದು. ಮುಖ್ಯವಾಗಿ ಯುವಕರು ಇದನ್ನು ಅರ್ಥೈಯಿಸಿಕೊಳ್ಳಬೇಕೆಂದರು.  

ವೇದಿಕೆಯಲ್ಲಿ ದತ್ತಿದಾನಿಗಳ ಪರವಾಗಿ ಅನಿಲ ಪರಡ್ಡಿ ಇದ್ದರು.  

ಡಾ. ಮಹೇಶ ಧ. ಹೊರಕೇರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.  

ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ಡಾ. ಶಿವಾನಂದ ಶೆಟ್ಟರ, ಮಹಾಂತೇಶ ನರೇಗಲ್, ಸಂಗಮೇಶ ಮೆಣಸಿನಕಾಯಿ, ಸಿದ್ಧರಾಮ ಹಿಪ್ಪರಗಿ, ಪರಡ್ಡಿ ಪರಿವಾರದವರು, ಅಭಿಮಾನಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ