ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ವರ್ತನೆ ಖಂಡಿಸಿ ಮನವಿ
ಕಾಗವಾಡ 27: ಪತ್ರಿಕಾ ವರದಿಗಾರರ ಮೇಲೆ ಗುಂಡಾವರ್ತನೆ ನಡೆಸಿದ ಮುದ್ದೇಬಿಹಾಳ್ ಶಾಸಕ ಎ.ಎಸ್.ಪಾಟೀಲ ನಡಹಳ್ಳಿಯವರ ಗುಂಡಾವರ್ತನೆಯನ್ನು ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ತಹಸಿಲ್ದಾರ ರಾಜೇಶ ಬುರ್ಲಿರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾನಿಪ ಧ್ವನಿ ಸಂಘದ ಕಾಗವಾಡ ತಾಲೂಕು ಅಧ್ಯಕ್ಷ ಮುರಗೇಶ ಗಸ್ತಿ ಮಾತನಾಡಿ ಸಮಾಜದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎತ್ತಿ ತೋರಿಸಿ, ಅವುಗಳು ಬಗೆಹರಿಯುವಂತೆ ಮಾಡುವುದು ಪತ್ರಕರ್ತರ ಹಕ್ಕು ಮತ್ತು ಕರ್ತವ್ಯವಾಗಿದೆ. ಆದರೆ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ತಮ್ಮ ತಪ್ಪನ್ನು ಮರೆಮಾಚಲು ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ವರದಿಗಾರನಿಗೆ ಮೊಬೈಲ್ ಮೂಲಕ ಜೀವ ಬೆದರಿಕೆ ಹಾಕಿದ್ದಲ್ಲದೇ ಅವಾಚ್ಯ ಶಬ್ದಗಳನ್ನು ಉಪಯೋಗಿಸಿರುವುದು ನಿಜಕ್ಕೂ ಇದು ಮಾಧ್ಯಮ ಕಗ್ಗೊಲೆಯೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನರವರು ಈ ಕೂಡಲೇ ಶಾಸಕರ ಮೇಲೆ ಕೇಸ್ ದಾಖಲಾಗಿ ಬಂಧನವಾಗುವವರೆಗೂ ಹೋರಾಟದ ಮುಂದಾಳತ್ವ ವಹಿಸುವುದರ ಜೊತೆಗೆ ಪತ್ರಕರ್ತರ ಬೆನ್ನಲುಬಾಗಿ ನಿಲ್ಲಬೇಕೆಂದು ಮನವಿ ಕೊಡುವುದರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿಯವರು ಕೂಡಲೇ ಶಾಸಕರ ಮೇಲೆ ಐ.ಪಿ.ಸಿ504 ಪತ್ರಕರ್ತರ ಜೀವ ಬೆದರಿಕೆ ಹಿನ್ನಲೆಯ ಐಪಿಸಿ 506ಕೇಸ್ ದಾಖಲಾಗುವಂತೆ ಕ್ರಮ ವಹಿಸಬೇಕು ಹಾಗೂ ಶಾಸಕರ ರಾಜೀನಾಮೆ ಪಡೆದು ಮಾದ್ಯಮರಂಗದ ಪ್ರತಿನಿಧಿಗಳಿಗೆ ಆಗಿರುವ ಅನ್ಯಾಯವನ್ನು ಈ ಕೂಡಲೇ ಸರಿಪಡಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಆಗ್ರಹಿಸುತ್ತದೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಉಪಾಧ್ಯಕ್ಷ ಶಿವಕುಮಾರ ದಳವಿ, ಸಹ ಕಾರ್ಯದರ್ಶಿ ಮನೋಜ ಪಾಟನಕರ, ಸಂಘಟನಾ ಕಾರ್ಯದರ್ಶಿ ಸೂರಜ ಕೊರೆ, ಭಾಸ್ಕರ ಐಹೊಳೆ, ಪ್ರಶಾಂತ ಸತ್ತಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.