ವ್ಯಕ್ತಿಯ ಜೀವನದಲ್ಲಿ ವ್ಯಕ್ತಿತ್ವಕ್ಕೆ ಮಹತ್ವದ ಸ್ಥಾನವಿದ್ದು: ಡಾ. ಮಹಾದೇವಪ್ಪ ದಳಪತಿ
ಧಾರವಾಡ,21 : ವ್ಯಕ್ತಿಯ ಜೀವನದಲ್ಲಿ ವ್ಯಕ್ತಿತ್ವಕ್ಕೆ ಮಹತ್ವದ ಸ್ಥಾನವಿದ್ದು, ದಿ. ಪ್ರೊ. ಆರ್. ವಿ. ಹೊರಡಿ ಅವರದು ದಿವ್ಯ ವ್ಯಕ್ತಿತ್ವದ ಅನುಕರಣೀಯ ಬದುಕು ಎಂದು ಕರ್ನಾಟಕ ಕಲಾ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಮಹಾದೇವಪ್ಪ ದಳಪತಿ ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಯ ಮತ್ತು ಪ್ರಿಯಾ ಆರ್. ಹೊರಡಿ ಹಾಗೂ ದಿ. ಪ್ರೊ. ಆರ್.ವಿ. ಹೊರಡಿ ಸಂಸ್ಮರಣೆಯ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಪ್ರತಿಭಾ ಪುರಸ್ಕಾರ’ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ದಿ. ಪ್ರೊ. ಆರ್. ವ್ಹಿ. ಹೊರಡಿ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಯಾವುದೇ ಟಿಪ್ಟಣಿ ಇಲ್ಲದೇ ನಿರರ್ಗಳವಾಗಿ ಉಪನ್ಯಾಸ ಮಾಡುವ ಚಾಕಚಕ್ಯತೆ ಅವರಲ್ಲಿತ್ತು. ಅವರು ಉಪನ್ಯಾಸಗಳಿಂದ ಪ್ರಭಾವಿತರಾಗಿದ್ದ ಎಷ್ಟೋ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ವಿದ್ಯಾರ್ಥಿಗಳ ಶ್ರೇಯೋಭಿಲಾಷೆಗಾಗಿ ಕರ್ತವ್ಯ ಪ್ರಜ್ಞೆಯಿಂದ ಕಾರ್ಯ ನಿರ್ವಹಿಸಿದರು. ಇಂದು ದತ್ತಿ ಮೂಲಕ ಅವರ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಲಾಗುತ್ತಿದೆ. ಅವರೊಬ್ಬ ಜನಮಾನಸದ ವ್ಯಕ್ತಿಗಳು. ಅವರ ಜೀವನ ಇಂದಿನ ಯುವಕರಿಗೊಂದು ಅನುಕರಣೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ದಿ. ಪ್ರೊ. ಆರ್. ವ್ಹಿ. ಹೊರಡಿ ಸ್ನೇಹಜೀವಿಗಳು ಮಕ್ಕಳಿಗೆ ಶಿಕ್ಷಣದ ಜೊತೆ ಒಳ್ಳೆ ಸಂಸ್ಕಾರ ಬೆಳೆಸಿದವರು. ಅವರು ಸದಾಕಾಲ ಎಲ್ಲರಿಗೂ ಸ್ಮರಣೀಐರು ಎಂದರು.
ದತ್ತಿ ಕಾರ್ಯಕ್ರಮದಲ್ಲಿ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಹಾಗೂ ಕಲಾ ಮಹಾವಿದ್ಯಾಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಮರ್ಥ ಕೆರಿಮನಿ, ದೀಪಾ ಕತ್ತಿ, ದೀಪಾ ದೇವಗಿರಿ, ಸಿದ್ಧಣ್ಣ ಪೂಜಾರಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳು ಪುರಸ್ಕಾರಕ್ಕೆ ಪ್ರತಿಕ್ರಿಯಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸತೀಶ ತುರಮರಿ, ಡಾ. ಶೈಲಜಾ ಅಮರಶೆಟ್ಟಿ, ಶಿವಾನಂದ ಭಾವಿಕಟ್ಟಿ, ವೆಂಕಟೇಶ ಮಾಚಕನೂರ, ಡಾ. ಪಿ.ಎಸ್. ಹಳ್ಯಾಳ, ಪ್ರೊ. ಎನ್. ಆರ್. ಬಾಳಿಕಾಯಿ, ಎಂ.ಜಿ. ಸುಬೇದಾರ, ರವಿಕುಮಾರ ಹರ್ತಿ, ಎಂ.ಎಸ್. ನರೇಗಲ್ ಸೇರಿದಂತೆ ದಿ. ಪ್ರೊ. ಆರ್. ವ್ಹಿ. ಹೊರಡಿ ಪರಿವಾರದವರು, ಅಭಿಮಾನಿಗಳೂ, ಶಿಷ್ಯಂದಿರು ಉಪಸ್ಥಿತರಿದ್ದರು.