ಕಾಗವಾಡ

ಮರಳಿ ರಂಗ ಭೂಮಿಯತ್ತ ಜನರ ಒಲವು

ಮರಳಿ ರಂಗ ಭೂಮಿಯತ್ತ ಜನರ ಒಲವು

ಸಾಹಿತಿ ದೇವಿಕಾ ನಗರಕರ ಅಭಿಮತ:  ದಾಖಲೆ ಸೃಷ್ಠಿಸಿದ “ಗ್ರಾಮ ಪಂಚಾಯತಿ ಗಂಗವ್ವ” ನಾಟಕ..!  

ಶೇಡಬಾಳ 15: ವೃತ್ತಿ ರಂಗ ಭೂಮಿಯಲ್ಲಿ ಬಣ್ಣದ ಬದುಕಿನ ಚಿನ್ನದ ದಿನಗಳು ಮತ್ತೆ ಮರುಕಳಿಸುತ್ತಲಿದೆ. ಸುಶ್ರಾವ್ಯ ರಂಗಗೀತೆ, ತತ್ವ ಪದಗಳು, ಅತಿಶಯ ಡಬಲ್ ಮಿನಿಂಗ್ ಇಲ್ಲದೆ, ಅಶ್ಲೀಲ ನೃತ್ಯಕ್ಕೆ ಆಸ್ಪದವಿಲ್ಲದೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡುವ ಶಕ್ತಿ ಚಿಕ್ಕೋಡಿ ಪಟ್ಟಣದಲ್ಲಿ ಹುಚ್ಚೇಶ್ವರ ನಾಟ್ಯ ಸಂಘ ಕಮತಗಿ ಇವರು  ಪ್ರಸ್ತುತ ಪಡಿಸುತ್ತಿರುವ “ಗ್ರಾಮ ಪಂಚಾಯತಿ ಗಂಗವ್ವ” ನಾಟಕ ಹೊಸ ದಾಖಲೆಯನ್ನು ಸೃಷ್ಠಿಮಾಡಿದೆ ಎಂದು ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಉಪನ್ಯಾಸಕಿ ದೇವಿಕಾ ನಗರಕರ ಹೇಳಿದರು. 

ಅವರು ಪತ್ರಿಕೆಯೊಂದಿಗೆ ಮಾತನಾಡುತ್ತ, ಒಂದು ನಾಟಕದ ಯಶಸ್ವಿಗೆ ಅಭಿನಯ ಸಂಭಾಷಣೆಯಷ್ಟೇ ಮುಖ್ಯವಾಗುವುದಿಲ್ಲ. ಅದರ ಜೊತೆಗೆ ರಂಗ ಸಜ್ಜಿಕೆ, ಹಾಡು, ಕಣ್ಣು ಕೊರೈಸುವ ದೀಪದ ವ್ಯವಸ್ಥೆ ಇವುಗಳು ನಾಟಕದ ಯಶಸ್ವಿಗೆ ಕಾರಣವಾಗುತ್ತವೆ. ಇವನ್ನೆಲ ್ಲಕೊಣ್ಣೂರ ಕಂಪನಿಯಲ್ಲಿ ಹಾಗೂ ಶಿರಹಟ್ಟಿಯ ವೆಂಕೋಬರಾಯರ ಕಂಪನಿಯಲ್ಲಿ ನಾಲ್ವತ್ತರ ದಶಕದಲ್ಲಿ ನಮಗೆ ನೋಡಲು ಸಿಗುತ್ತಿದ್ದವು. ಹೀಗಾಗಿ ಪ್ರೇಕ್ಷಕರ ಮತ್ತು ರಂಗಭೂಮಿಯ ಅವಿನಾಭಾವ ಸಂಬಂಧ ಅಲ್ಲಿ ಇತ್ತು. 

ಚಿಕ್ಕೋಡಿಯಲ್ಲಿ ಪ್ರದರ್ಶಿಲಾಗುತ್ತಿರುವ “ಗ್ರಾಮ ಪಂಚಾಯತಿ ಗಂಗವ್ವ” ನಾಟಕ ವೀಕ್ಷಿಸಲು ಕಲಾಭಿಮಾನಿಗಳು ಜಿಟಿಜಿಟಿ ಮಳೆಯನ್ನು ಲೆಕ್ಕಿಸದೆ ಥೇಟರ್ ತುಂಬಿ ತುಳುಕುತ್ತಲಿದೆ. ಮಹಿಳೆಯರೂ ಇದಕ್ಕೆ ಹೊರತಾಗಿಲ್ಲ. ಮಹಿಳೆಯರು ನಾಟಕ ನೋಡುವುದೇ ಅಪರಾಧವೆಂಬ ಒಂದು ಕಾಲ ಇತ್ತು. ಇವತ್ತೂ ಮಡಿವಂತಿಕೆಯ ಮನಸ್ಸುಗಳು ಇವೆ. ಆದರೆ ಒಳ್ಳೆಯದನ್ನು ಕೊಟ್ಟರೆ ಅದನ್ನು ಸ್ವೀಕರಿಸುವ ಮನಸ್ಸುಗಳು ನಮ್ಮಲ್ಲಿವೆ ಎಂಬುದನ್ನು ಸಾಬೀತು ಮಾಡಿದೆ ಈ ನಾಟಕ.  

ಸಿನಿಮಾ, ದೂರದರ್ಶನ ಹಾವಳಿಯಲ್ಲಿ ವೃತ್ತಿ ರಂಗಭೂಮಿ ನೇಪಥ್ಯಕ್ಕೆ ಸರಿದಿತ್ತು. ಇವತ್ತು ಮತ್ತೆ ರಂಗಭೂಮಿಯ ವೈಭವದ ದಿನಗಳು ಮರುಕಳಿಸುತ್ತಲಿವೆ. 1961 ರಲ್ಲಿ ಬಾಗಲಕೋಟೆಯ ಕಮತಗಿಯಲ್ಲಿ ಹುಟ್ಟಿ ನಾಲ್ವತ್ತರ ದಶಕದಲ್ಲಿ ಕರ್ನಾಟಕದ ಉದ್ದಗಲಕ್ಕೂ ಮೆರೆದ, ವೃತ್ತಿರಂಗ ಭೂಮಿಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸಿದ ಹುಚ್ಚೇಶ್ವರ ನಾಟ್ಯ ಸಂಘದ ಸಂಸ್ಥಾಪಕ ಬಿ.ಆರ್‌. ಅರಿಶಿನ ಗೂಡಿಯವರ ಹೊಂದಿದ್ದ ಮಂಡಳಿ ಮೂರು ಶಾಖೆಗಳಾಗಿ ಬೆಳೆದು ಕರ್ನಾಟಕದ ಮನೆಮಾತಾಗಲು ಅರಿಶಿನಗೂಡಿಯವರ ವ್ಯವಹಾರ ಕುಶಲತೆ, ಶಿಸ್ತು ಶ್ರದ್ಧೆಗಳೇ ಕಾರಣ. ಇವತ್ತು ಆ ಕಂಪನಿಯ ಒಡೆತನ ಮಲ್ಲೇಶ ಕಲ್ಲೂರ ಅವರ ಮಾಲಿಕತ್ವದಲ್ಲಿ 2018 ರಿಂದ ಇಲ್‌ಕಲ್ ಕ್ಯಾಂಪಿನಿಂದ ಪ್ರಾರಂಭವಾಗಿ ಹೊಸ ಹೊಸ ಕಲಾವಿದರಿಗೆ ಅವಕಾಶ ಕೊಡುವುದರ ಮೂಲಕ ಹೊಸ ನಾಟಕಗಳನ್ನು ಪ್ರದರ್ಶಿಸುತ್ತ ಕಮತಗಿ ಕಂಪನಿಯ ಖ್ಯಾತಿಯನ್ನು ಇನ್ನಷ್ಟು ಎತ್ತರಕ್ಕೇರಿಸಿದೆ.  

ದಿವಂಗತ ಕೃಷ್ಣಮೂರ್ತಿ ಶಾಸ್ತ್ರಿ ಶಲವಡಿ ಇವರು ರಚಿಸಿದ “ಗ್ರಾಮ ಪಂಚಾಯತಿ ಗಂಗವ್ವ” ಅದ್ದೂರಿ ಪ್ರದರ್ಶನ ಕಾಣುತ್ತಲಿದೆ. ಮಲ್ಲೇಶ ಕಲ್ಲೂರ ಹಾಗೂ ಅವರ ಧರ್ಮಪತ್ನಿ ಜ್ಯೋತಿ ಮಲ್ಲೇಶ ಮಂಗಳೂರು ಅವರ ಸಾರಥ್ಯದಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ದಿನಾಲು ಎರಡು ಆಟಗಳು ಪ್ರದರ್ಶನ ಗೊಳ್ಳುತ್ತಲಿದೆ.  

ಹಳ್ಳಿಯ ಸುಂದರ ಯುವತಿ ಗಂಗವ್ವ, ಸತ್ಯ ಇವಳ ಗಂಡ, ಹೆಸರಿಗೆ ತಕ್ಕಂತೆ ಸತ್ಯಕ್ಕೆ ಹೆಸರಾದವನು. ಊರ ಸಾಹುಕಾರ (ಜಮೀನದಾರ) ಧರ್ಮರಾಜನ ಮಗ ಧನರಾಜನ ಕಾಮುಕ ಕಣ್ಣು ಗಂಗವ್ವಳ ಮೇಲೆ ಬೀಳುತ್ತದೆ. ಅವಳ ಗಂಡ ಸತ್ಯನಿಗೆ ಕುಡುಕನನ್ನಾಗಿ ಮಾಡುವುದಲ್ಲದೆ, ಗಂಗವ್ವ ನೀತಿ ಗೆಟ್ಟವಳು ಎಂದು ಹೇಳಿ, ಹಾಲಿನಂಥ ಸಂಸಾರದಲ್ಲಿ ಹುಳಿ ಹಿಂಡುತ್ತಾನೆ ಧನರಾಜ. ಗಂಗವ್ವ ಹಳ್ಳಿಯ ಯುವತಿಯಾಗಿದ್ದರೂ, ಕಾಮುಕನ ಮೋಸಕ್ಕೆ ಬಲಿಯಾಗದೆ, ಅವನನ್ನು ಪ್ರೀತಿಸುವ ನಾಟಕವಾಡುತ್ತಾಳೆ. ಅವಳ ಸೌಂದರ‌್ಯಕ್ಕೆ ಮಾರು ಹೋದ ಧನರಾಜ ಅವಳನ್ನು ಪಂಚಾಯತಿಯ ಅಧ್ಯಕ್ಷಳನ್ನಾಗಿ ಮಾಡುತ್ತಾನೆ. ಅಧಿಕಾರದ ಗದ್ದುಗೆಯನ್ನೇರಿದ ಗಂಗವ್ವ ಕಾಮುಕನ ಬಣ್ಣ ಬಯಲು ಮಾಡಿ, ಅವನಿಗೆ ತಕ್ಕ ಪಾಠ ಕಲಿಸುತ್ತಾಳೆ. ಗಂಗವ್ವ ಈ ಪಾತ್ರ ಇವತ್ತಿನ ಮಹಿಳೆಯರಿಗೆ ಮಾದರಿಯಾಗುತ್ತದೆ.  

ಶರತ್ ಕುಂಬ್ಳೆ, ದಯಾನಂದ ಬೀಳಗಿ, ರಿಯಾಜ್ ಕರಜಗಿ, ದಾನೇಶ ಗದಗ, ಪುಟ್ಟರಾಜ ಮಂಗಳೂರು, ಶ್ವೇತಾ ಬೀಳಗಿ, ಜ್ಯೋತಿ ಮಂಗಳೂರು, ಧನಶ್ರೀ ಗದಗ ಇವರ ಅದ್ಭುತ ಅಭಿನಯ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ ಎಂದು ದೇವಿಕಾ ನಗರಕರ ಹೇಳಿದರು. 


ಸುದ್ದಿ ಓದಿ