ಕ್ಷೇತ್ರದ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯ: ಶಾಸಕ ರಾಜು ಕಾಗೆ
2.5 ಕೋಟಿ ಅನುದಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ;
ಕಾಗವಾಡ 22: ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಸರ್ಕಾರದಿಂದ ತಂದು, ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುತ್ತಿದ್ದು, ಕ್ಷೇತ್ರದ ಜನರು ಅಭಿವೃದ್ಧಿ ಕಾರ್ಯಗಳನ್ನು ಮಾಡುವಾಗ ಯಾವುದೇ ತಂಟೆ-ತಕರಾರು ಮಾಡದೇ ಗುತ್ತಿಗೆದಾರರಿಂದ ಗುಣಮಟ್ಟದ ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ರಾಜು ಕಾಗೆ ಹೇಳಿದ್ದಾರೆ.
ಅವರು, ಶುಕ್ರವಾರ ದಿ. 22 ರಂದು ಕಾಗವಾಡ ಮತಕ್ಷೇತ್ರದಲ್ಲಿ ಮುಖ್ಯಮಂತ್ರಿಯವರ 25 ಕೋಟಿ ವಿಷೇಶ ಅನುದಾನದ ಪೈಕಿ ಸುಮಾರು 2.5 ಕೋಟಿ ಅನುದಾನದ ವಿವಿಧ ರಸ್ತೆ ಅಭಿವೃದ್ಧಿ, ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ, ಮಾತನಾಡುತ್ತಿದ್ದರು. ರಸ್ತೆಗಳು ಅಭಿವೃದ್ದಿ ಹೊಂದಿದರೇ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ಸುಗಮವಾಗಿ ಮಾರುಕಟ್ಟೆಗೆ ಸಾಗಿಸಲು ಅನಕೂಲವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ತಮ್ಮ ಜಮೀನಿನ ಪಕ್ಕದ ರಸ್ತೆ ಅಭವೃದ್ಧಿ ಕಾಮಗಾರಿಗೆ ಯಾವುದೇ ಅಡತಡೆ ಮಾಡಬಾರದೆಂದು ರೈತರಿಗೆ ಕಿವಿ ಮಾತು ಹೇಳಿದರು.
ಈ ಸಮಯದಲ್ಲಿ ಒಟ್ಟು 2.5 ಕೋಟಿ ರೂ.ಗಳ ಅನುದಾನದಲ್ಲಿ ಪಾರ್ಥನಳ್ಳಿಯಲ್ಲಿ ರಸ್ತೆ ಅಭಿವೃದ್ಧಿ, ಚಮಕೇರಿಯಲ್ಲಿ ಅಥಣಿ ರಸ್ತೆಯಿಂದ ಹುಲ್ಲಿಕೋಡಿ ರಸ್ತೆ, ಬೇಡರಹಟ್ಟಿ-ಅಡಳಹಟ್ಟಿ ರಸ್ತೆ, ಗುಂಡೇವಾಡಿ-ಚಮಕೇರಿ-ಬಳ್ಳಿಗೇರಿ ರಸ್ತೆ, ಬಳ್ಳಿಗೇರಿ-ಸಿಂಧೂರ ತೋಟದ ರಸ್ತೆ, ಮಂಗಸೂಳಿ ಯಲ್ಲಮ್ಮಾ ದೇವಸ್ಥಾನದಿಂದ ರಾಜ್ಯ ಗಡಿ ವರೆಗಿನ ರಸ್ತೆ, ಮಂಗಸೂಳಿಯಲ್ಲಿ 4 ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ಮತ್ತು ಶೇಡಬಾಳದ ಮಿರ್ಜೆ ತೋಟದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಮಯದಲ್ಲಿ ಪಂಚಾಯತ ರಾಜ್ ಇಲಾಖೆಯ ಎಇಇ ವೀರಣ್ಣಾ ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮುಂಜೆ, ಪಿಎಸ್‌ಐ ಜಿ.ಜಿ. ಬಿರಾದರ, ಮುಖಂಡರಾದ ಚಂದ್ರಕಾಂತ ಇಮ್ಮಡಿ, ರವೀಂದ್ರ ಪೂಜಾರಿ, ಶಿವಾನಂದ ಹುಚ್ಚಗೌಡರ, ವಿನಯ ಇಮ್ಮಡಿ, ವಿನೋದ ಬರಗಾಲಿ, ಸಂಜಯ ತಳವಳಕರ, ಮುಕುಂದ ಪೂಜಾರಿ, ಬಾಳು ಬಜಂತ್ರಿ, ರಮೇಶ ಪಾಟೀಲ, ವಿಠ್ಠಲ ಸಂಕ್ರಟ್ಟಿ, ಭೀಮಪ್ಪಾ ಕುಳ್ಳೋಳ್ಳಿ, ಸಿದ್ರಾಮ ತೇಲಿ ಸೇರಿದಂತೆ ಪಾರ್ಥನಳ್ಳಿ, ಚಮಕೇರಿ, ಬಳ್ಳಿಗೇರಿ, ಗುಂಡೇವಾಡಿ, ಮಂಗಸೂಳಿ, ಶೇಡಬಾಳ ಗ್ರಾಮಸ್ಥರು ಉಪಸ್ಥಿತರಿದ್ದರು.