ಉಗಾರ ಶುಗರ ವರ್ಕ್ಸ ಕಾರ್ಮಿಕರ ಮುಷ್ಕರಕ್ಕೆ ರೈತರ ಬೆಂಬಲ
ಶೇಡಬಾಳ 30: ಕಾಗವಾಡ ತಾಲೂಕಿನ ದಿ.ಉಗಾರ ಶುಗರ ವರ್ಕ್ಸ ಸಕ್ಕರೆ ಕಾರ್ಖಾನೆಯ ಕಾರ್ಮಿಕರು ಬುಧವಾರ ದಿ. 1 ರಿಂದ ಕೈಗೊಳ್ಳಲಿರುವ ಅನಿರ್ದಿಷ್ಟ ಕಾರ್ಮಿಕರ ಮುಷ್ಕರಕ್ಕೆ ಈ ಭಾಗದ ರೈತರು ನೈತಿಕ ಬೆಂಬಲ ನೀಡುತ್ತೇವೆ ಎಂದು ರೈತ ಮುಖಂಡರಾದ ಶೀತಲಗೌಡ ಪಾಟೀಲ ಹೇಳಿದರು.
ಮಂಗಳವಾರ ದಿ. 30 ರಂದು ಉಗಾರ ಬುದ್ರುಕ್ ಗ್ರಾಮದ ತಮ್ಮ ಕಾರ್ಯಾಲಯದಲ್ಲಿ ರೈತ ಮುಖಂಡರ ಸಮ್ಮುಖದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಶೀತಲಗೌಡ ಪಾಟೀಲ ಮಾತನಾಡುತ್ತಾ ಉಗಾರ ಸಕ್ಕರೆ ಕಾರ್ಖಾನೆಯ ಕಾರ್ಮಿಕರು ಕಳೆದ ಅನೇಕ ದಿನಗಳಿಂದ ತಮ್ಮ ಬೇಡಿಕೆಗಳನ್ನು ಈಡೇರಿಸಲು ಕಾರ್ಖಾನೆಯ ಎಂ.ಡಿ ಚಂದನ ಶಿರಗಾಂವಕರ ಇವರೊಂದಿಗೆ ಹಲವಾರು ಬಾರಿ ಚರ್ಚಿಸಿದ್ದಾರೆ. ಆದರೆ ಅವರು ಕಾರ್ಮಿಕರ ಭಾವನೆಗೆ ಸ್ಪಂದಿಸದೇ ಇರುವದರಿಂದ ಇಲ್ಲಿಯವರೆಗೆ ಯಾವುದೇ ನಿರ್ಣಯ ಕೈಗೊಳ್ಳಲಾಗಿರಲಿಲ್ಲ.
ಮಂಗಳವಾರ ದಿ. 30 ರಂದು ಬೆಳಗಾವಿ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಕರೆಯಲಾಗಿದ್ದ ಸಂಧಾನ ಸಭೆಗೆ ಕಾರ್ಮಿಕರು ನನ್ನನ್ನು ಆಹ್ವಾನಿಸಿದ್ದರು. ನಾನು ಸಭೆಗೆ ಹೋಗಿದ್ದೆ. ಈ ಸಭೆಗೆ ನಾವೆಲ್ಲರೂ ಹಾಜರಿದ್ದರು ಕೂಡ ಸಕ್ಕರೆ ಕಾರ್ಖಾನೆಯ ಯಾವೊಬ್ಬ ಜವಾಬ್ದಾರಿಯುತ ಅಧಿಕಾರಿ ಬಾರದೆ ಇರುವದರಿಂದ ಸಭೆ ವಿಫಲವಾಗಿ ಮರಳಿ ಬಂದಿದ್ದೇವೆ ಎಂದು ಶೀತಲಗೌಡ ಪಾಟೀಲ ಹೇಳಿದರು.
ಕಾರಣ ಬುಧವಾರದಿಂದ ಉಗಾರ ಸಕ್ಕರೆ ಕಾರ್ಖಾನೆಯ ಮುಂದೆ ಕಾರ್ಮಿಕರು ಕೈಗೊಳ್ಳಲಿರುವ ಮುಷ್ಕರಕ್ಕೆ ಈ ಭಾಗದ ರೈತರ ಪರವಾಗಿ ಬೆಂಬಲ ನೀಡಲು ಸಿದ್ಧವಿರುವುದಾಗಿ ಅವರು ಹೇಳಿದರು.
ಇಲ್ಲಿಯವರೆಗೆ ಕಬ್ಬು ಬೆಳೆಗಾರರು ಕೈಗೊಂಡ ಪ್ರತಿಯೊಂದು ಹೋರಾಟಕ್ಕೆ ಸಕ್ಕರೆ ಕಾರ್ಖಾನೆ ಕಾರ್ಮಿಕರು ಬೆಂಬಲ ನೀಡುತ್ತಾ ಬಂದಿದ್ದಾರೆ. ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ರೈತರು ಯಾವ ಯಾವ ಸಂದರ್ಭದಲ್ಲಿ ಹೋರಾಟ ಮಾಡಿದ್ದೇವೋ ಆ ಸಂದರ್ಭದಲ್ಲಿ ಕಾರ್ಮಿಕರು ಕಾರ್ಖಾನೆಯನ್ನು ಬಂದ್ ಮಾಡಿ ರೈತರಿಗೆ ಬೆಂಬಲ ನೀಡಿದ್ದರು. ಈಗ ಕಾರ್ಮಿಕರು ಸಂಕಷ್ಟದ ಸಮಯದಲ್ಲಿರುವದರಿಂದ ರೈತರ ಪರವಾಗಿ ಬೆಂಬಲ ನೀಡುತ್ತಿದ್ದೇವೆಂದು ಹೇಳಿದರು.
ಕಾರ್ಮಿಕರ ಬೇಡಿಕೆಗಳ ಕುರಿತು ಶೀತಲಗೌಡ ಪಾಟೀಲ ಮಾತನಾಡುತ್ತಾ ಕಾರ್ಖಾನೆಯು 18 ಸಾವಿರ ಟಿಸಿಡಿ ಉತ್ಪಾನೆಯನ್ನು ಮಾಡುತ್ತಿದ್ದು ಅದರನ್ವಯ ಕಾರ್ಮಿಕರ ಸ್ಥೀರಿಕರಣ ನಿಗದಿ ಪಡಿಸಬೇಕು, ಅನುಕಂಪದ ಆಧಾರದ ಮೇಲೆ ಕಾರ್ಮಿಕರ ಮಕ್ಕಳನ್ನು ವೇಜಬೋರ್ಡ್ ಆಧಾರಿತ ಕಾರ್ಮಿಕರನ್ನಾಗಿ ಕೆಲಸಕ್ಕೆ ತೆಗೆದುಕೊಳ್ಳಬೇಕು, ಹಂಗಾಮಿ ಕಾರ್ಮಿಕರನ್ನು ಖಾಲಿ ಇರುವ ಜಾಗದಲ್ಲಿ ಖಾಯಂಗೊಳಿಸಬೇಕು. ಗುತ್ತಿಕೆದಾರ ಕಾರ್ಮಿಕರನ್ನು ವೇಜಬೋರ್ಡ್ ಕಾರ್ಮಿಕರನ್ನಾಗಿ ಪರಿವರ್ತಿಸಬೇಕು ಹೀಗೆ 17 ಬೇಡಿಕೆಗಳನ್ನು ಈಡೇರಿಕೆಗಾಗಿ ಕಾರ್ಮಿಕರು ಈ ಮುಷ್ಕರವನ್ನು ಕೈಗೊಂಡಿದ್ದಾರೆ.
ಇಲ್ಲಿವರೆಗೆ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸದೇ ಇರುವದರಿಂದ ಅನಿವಾರ್ಯವಾಗಿ ಈ ಮುಷ್ಕರ ಕೈಗೊಳ್ಳಬೇಕಾಗಿದೆ. ಅದಕ್ಕೆ ತಮ್ಮ ಬೆಂಬಲ ನೀಡುತ್ತಿದ್ದೇವೆಂದು ಹೇಳಿದರು.
ರೈತ ಮುಖಂಡರಾದ ಅಪ್ಪಾಸಾಬ ಚೌಗುಲೆ, ಪ್ರಮೋದ ಹೊಸುರೆ, ಅಣ್ಣಾಗೌಡ ಪಾಟೀಲ, ಬಾಳಾಸಾಬ ಹವಲೆ, ಪ್ರವೀಣ ಹೊಸುರೆ, ಮಹಾವೀರ ವಸವಾಡೆ, ಅಣ್ಣಾಸಾಬ ನಂದಗಾಂವೆ, ಪ್ರಶಾಂತ ವಸವಾಡೆ, ರಾಹುಲ ಭೋಸಲೆ, ಭರತೇಶ ಖಂಡೇರಾಜುರೆ, ಪ್ರಶಾಂತ ಕುಸನಾಳೆ, ಅಭಿಷೇಕ ಚೌಗುಲೆ, ಪ್ರಮೋದ ಆಳಪ್ಪನವರ ಸೇರಿದಂತೆ ಅನೇಕರು ಇದ್ದರು.