ಬೈಲಹೊಂಗಲ

ಕಲಿತ ಪ್ರೌಢಶಾಲೆಗೆ ಸುಣ್ಣ ಬಣ್ಣ

ಕಲಿತ ಪ್ರೌಢಶಾಲೆಗೆ ಸುಣ್ಣ ಬಣ್ಣ

ಕುಬಸದ ಸಹೋದರರಿಂದ ಮಾದರಿ ಕಾರ್ಯ 

ಬೈಲಹೊಂಗಲ 05: ಸುಮಾರು 108 ವರ್ಷ ಇತಿಹಾಸ ಹೊಂದಿರುವ ಇಲ್ಲಿರುವ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯ ಋಣ ತೀರಿಸಲು ಇಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಈಗ ಎಚ್ಚೆತ್ತುಕೊಂಡು ಶಾಲೆಯ ಅಭಿವೃದ್ಧಿ ಸ್ವಚ್ಛತೆಗೆ ಒತ್ತು ನೀಡುತ್ತ ಶಾಲೆಯ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿ ಗೌರವ ಸನ್ಮಾನ ಮಾಡಿ ಕಲಿತ ಶಾಲೆಯ ಬಾಲ್ಯದ ನೆನಪುಗಳನ್ನು ವಿವಿಧ ರೀತಿಯಲ್ಲಿ ಸ್ಮರಿಸುತಿದ್ದಾರೆ. 

ಈ ಶಾಲೆಯಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ರಾಜಕಾರಣದಲ್ಲಿ ಮಿಂಚಿದ್ದಾರೆ, ವೈದ್ಯರಾಗಿ, ವಿಜ್ಞಾನಿ, ಇಂಜನೀಯರ, ಶಿಕ್ಷಕರು, ಉಪನ್ಯಾಸಕರು, ಉದ್ಯೆಮಿಗಳಾಗಿ ಆರ್ಥಿಕವಾಗಿ ಅಭ್ಯುದಯ ಹೊಂದಿದ್ದಾರೆ. ನೂರಾರು ಜನ ವಿದೇಶಗಳಲ್ಲಿ ವೃತ್ತಿ, ಸ್ವಂತ ಉದ್ದಿಮೆ ನಡೆಸುತ್ತಿದ್ದಾರೆ.  

ಹಳೆಯ ವಿದ್ಯಾರ್ಥಿಗಳು ಮೊಬೈಲ ತಂತ್ರಜ್ಞಾನ ಬಂದ ನಂತರ ವಾಟ್ಸಪ್ಪ, ಫೇಸಬುಕ್, ಇನ್ಟಾ-್ಸಗ್ರಾಂ ಮುಖಾಂತರ ಹಳೆಯ ಗೆಳೆಯರು ಕೂಡಿ ಸಂಭ್ರಮಿಸುವ ಕಾಲ ಬಂದೊದಗಿದೆ. ಹೀಗಾಗಿ ಹಳೆಯ ಗೆಳೆಯರು ಕಲಿತ ಶಾಲೆಯ ನೆನಪಿನೊಂದಿಗೆ ಕಲಿಸಿದ ಶಿಕ್ಷಕರನ್ನು ತಮ್ಮ ಹಳೆಯ ಶಾಲೆಯನ್ನು ಸ್ಮರಿಸಿ ಹಳೆಯ ವಿದ್ಯಾರ್ಥಿಗಳ ಸಂಘದ ಹೆಸರಿನಲ್ಲಿ ಶಾಲೆಯ ಅಭಿವೃದ್ದಿಗೆ ಚಿಂತನೆ ನಡೆಸುತ್ತಿದ್ದಾರೆ. 

ಇದೇ ಶಾಲೆಯಲ್ಲಿ ಕಲಿತ ಶ್ರೀಶೈಲ ಶಿವಾನಂದ ಕುಬಸದ ಹಾಗೂ ಬಸವರಾಜ ಶಿವಾನಂದ ಕುಬಸದ ಸಹೋದರರು ಹೈದ್ರಾಬಾದಿನಲ್ಲಿ ಉದ್ಯಮಿಗಳಾಗಿದ್ದಾರೆ. ಶಾಲೆಯ ಋಣ ತೀರಿಸಲು ಸುಮಾರು ರೂ.1 ಲಕ್ಷ 50 ಸಾವಿರ ಗಳ ಖರ್ಚಿನಲ್ಲಿ ಒಡೆದ  ಕಿಟಕಿಯ ಗಾಜು ಹಾಕಿಸಿ, ಶಾಲೆಗೆ ಬಣ್ಣ ಹಚ್ಚಿಸಿದ್ದಾರೆ. ಅಲ್ಲದೇ ಇದೆ ಶಾಲೆಯ ವಿದ್ಯಾರ್ಥಿನಿಯರಿಗಾಗಿ ರೂ.1 ಲಕ್ಷ 75 ಸಾವಿರ ಗಳಲ್ಲಿ ಸುಸಜ್ಜಿತವಾದ ಶೌಚಾಲಯಗಳನ್ನು ನಿರ್ಮಿಸಲು ಪಣ ತೊಟ್ಟಿದ್ದಾರೆ.  ಕಲಿತ ಶಾಲೆಗೆ  ಕೈಲಾದಷ್ಟು ಸಹಾಯ ಮಾಡುವುದಾಗಿ ತಮ್ಮ ಉದಾರತೆ ಮೆರೆದಿದ್ದಾರೆ. ಇವರಂತೆ ಈ ಶಾಲೆಯಲ್ಲಿ ಕಲಿತ ಪ್ರತಿಯೊಬ್ಬ ಹಳೆಯ ವಿದ್ಯಾರ್ಥಿಗಳು ಕಲಿತ ಶಾಲೆಯ ಅಭಿವೃದ್ಧಿಗಾಗಿ ಕೈಜೋಡಿಸಿದಲ್ಲಿ ಈ ಶಾಲೆಯನ್ನು ಮತ್ತಷ್ಟು ಉತ್ತುಂಗ ಶಿಖರಕ್ಕೇರಿಸಬಹುದಾಗಿದೆ. ಶಾಲೆಯ ಋಣ, ಶಿಕ್ಷಕರಿಗೆ ಕೊಡುವ ಗೌರವ ಸಾರ್ಥಕವಾಗುತ್ತದೆ ಎನ್ನುವುದಕ್ಕೆ  ಕುಬಸದ ಸಹೋದರರು ಸಾಕ್ಷಿಯಾಗಿದ್ದಾರೆ. 


ಸುದ್ದಿ ಓದಿ