ಇಂಡಿ

ಕಾರ್ಖಾನೆಯ ಅವ್ಯವಹಾರದ ಕುರಿತು ಸಿಓಡಿ ತನಿಖೆಯಾಗಬೇಕೆಂದು ಪಾಟೀಲ ಆಗ್ರಹ

ಕಾರ್ಖಾನೆಯ ಅವ್ಯವಹಾರದ ಕುರಿತು ಸಿಓಡಿ ತನಿಖೆಯಾಗಬೇಕೆಂದು ಪಾಟೀಲ ಆಗ್ರಹ


ಇಂಡಿ:  ಇಂಡಿ ತಾಲೂಕಿನ ಮರಗೂರದಲ್ಲಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಸಕ್ಕರೆ ಗೋದಾಮು ಅಕಾಲಿಕ ಮಳೆ, ಗಾಳಿಗೆ ಬಿದ್ದು 50 ಕೆಜಿ ತೂಕದ 63 ಸಾವಿರ ಚೀಲ ಸಕ್ಕರೆ ಹಾನಿ ಆಗಿವೆ ಎಂದು ಕಾರ್ಖಾನೆಯವರು ಪತ್ರಿಕೆಗಳ ಮೂಲಕ ಹೇಳಿಕೆ ನೀಡಿದ್ದು ಕಾರ್ಖಾನೆಯ ಭಾಗದಲ್ಲಿ ಮಳೆ ಆಗಿಲ್ಲ. ಗಾಳಿಗೆ ಗೋದಾಮು ನೆಲಕ್ಕುರುಳಿದೆ ಸಕ್ಕರೆ ಹಾನಿಯಾಗದೇ ಸುಳ್ಳು ಹೇಳಲಾಗುತ್ತಿದೆ. ಕಾರ್ಖಾನೆಯ ಅವ್ಯವಹಾರದ ಕುರಿತು ಸಿಓಡಿ ತನಿಖೆಯಾಗಬೇಕೆಂದು ಮಾಜಿ ಶಾಸಕ ರವಿಕಾಂತ ಪಾಟೀಲ ಆಗ್ರಹಿಸಿದರು. 

ಅವರು ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. 

ಇನ್ನೆರಡು ದಿನದಲ್ಲಿ ಎರಡರಿಂದ ಮೂರು ನೂರು ಜನ ರೈತರೊಂದಿಗೆ ಕಾರ್ಖಾನೆಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿ ಅರಿತು, ಸುಳ್ಳು ಹೇಳಿಕೆ ನೀಡಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಹಾಗೂ ಸಹಕಾರಿ ಸಚಿವರನ್ನು ಭೇಟಿಯಾಗುವೆ ಎಂದರು. 

ಕಳೆದ ವರ್ಷವೂ ಮಳೆ, ಗಾಳಿ ಬಂದು ಹಾನಿಯಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ವರ್ಷವೂ ಅದೇ ರೀತಿ ಹೇಳಿಕೆ ನೀಡಿದ್ದಾರೆ .ಇನ್ಸೂರನ್ಸ ಪಡೆಯಲು ಈ ರೀತಿ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಇದರಲ್ಲಿ ಇನ್ಸೂರನ್ಸ ಕಂಪನಿಯೂ ಶಾಮಿಲಾಗಿರಬಹುದು ಎಂಬ ಸಂಶಯ ಮೂಡಿದೆ. ಮಾಹಿತಿ ಹಕ್ಕಿನ ಅಡಿಯಲ್ಲಿ ಮಾಹಿತಿ ಪಡೆದುಕೊಂಡು ಸಿಒಡಿ ತನಿಖೆಗೆ ಆಗ್ರಹಿಸುವುದಾಗಿ ಹೇಳಿದರು. 

ಬಿಜೆಪಿ ಟಿಕೇಟ್ ಪಡೆಯಲು ಪ್ರಯತ್ನಿಸುತ್ತಿದ್ದೇನೆ. ಮುಖ್ಯಮಂತ್ರಿಗಳು ನನಗೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಇಂಡಿ ಕ್ಷೇತ್ರದಲ್ಲಿ ನನಗೆ ಟಿಕೆಟ್ ನೀಡಿದರೆ ಮಾತ್ರ ಬಿಜೆಪಿ ಗೆಲ್ಲುತ್ತದೆ. ಬಿಜೆಪಿಯವರು ಬೇಕಾದರೆ ಸಮೀಕ್ಷೆ ನಡೆಸಿ ನನಗೆ ಟಿಕೆಟ್ ನೀಡಲಿ ಎಂದರು. 

ಯುವ ಮುಖಂಡ ಬಾಳು ಗಣೋರೆ, ಸಿಕಂದರ ಬೊರಾಮಣಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.   


ಸುದ್ದಿ ಓದಿ