ಕವಿಗಳಲ್ಲಿ ತಾಳ್ಮೆ ಅಗತ್ಯ, ಕವಿಗಳು ಸಾರ್ವತ್ರಿಕವಾಗಿರಬೇಕು: ಶಿವಕುಮಾರ ಹೊನ್ನಾಳಿ
ರಾಣಿಬೆನ್ನೂರ 13: ಕವಿಗಳಲ್ಲಿ ತಾಳ್ಮೆ ಅಗತ್ಯ, ಕವಿಗಳು ಸಾರ್ವತ್ರಿಕವಾಗಿರಬೇಕು. ಸಾಹಿತ್ಯ ಸಮಾಜ ಮುಖಿ ಚಿಂತನೆಗಳನ್ನು ಪ್ರತಿಪಾದಿಸಿದಾಗ ಮಾತ್ರ ಜನ ಮಾನಸದಲ್ಲಿ ಉಳಿದುಕೊಳ್ಳಲು ಸಾಧ್ಯ. ಅಸಹನೆಗಳನ್ನು ಬೇರುಸಮೇತ ಕಿತ್ತುಹಾಕಬೇಕು ಎಂದು ಪ್ರಾಧ್ಯಾಪಕ ಡಾ; ಎಮ್.ಈ. ಶಿವಕುಮಾರ ಹೊನ್ನಾಳಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಸಮಾರಂಭದಲ್ಲಿ ಸ್ಥಳಿಯ ಖ್ಯಾತ ಕವಿ ದೇವರಾಜ್ ಹುಣಸಿಕಟ್ಟಿ ಅವರ ಹಕೀಮನೊಬ್ಬನ ತಕರಾರು ಎಂಬ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಾಹಿತ್ಯ ಕ್ಷೇತ್ರದ ಮೂಲಕ ಸಮಾಜದ ಓರೆಕೋರೆಗಳನ್ನ ತಿದ್ದುವ ಶಕ್ತಿ ಬರುತ್ತದೆ. ಇಂತಹ ಸಾಧ್ಯತೆಗಳನ್ನು ಕವಿ ದೇವರಾಜ ತಮ್ಮ ಕೃತಿಯ ಕವನಗಳ ಮೂಲಕ ವ್ಯಕ್ತ ಪಡಿಸಿದ್ದಾರೆ.. ಇಂದಿನ ಬರಹಗಾರರು ಸಾಹಿತಿಗಳು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸತೀಶ ಕಲಕರ್ಣಿ ಮಾತನಾಡಿ, ಕವಿತೆಗಳಲ್ಲಿ ನಿರಂತರ ಕೃಷಿ ಇರಬೇಕು. ಮೊನಚು, ನೇರ, ದಿಟ್ಟತನ ಇರಬೇಕು. ಇಂದಿನ ಯುವ ಸಾಹಿತಿಗಳಲ್ಲಿ ಇಂದು ಸಾಮಾಜಿಕ ಬದ್ಧತೆ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದ ಅವರು, ಸಮಾಜ ಮುಖಿಯಾಗಿರಬೇಕಾದ ಇಂದಿನ ಅನೇಕ ಸಾಹಿತಿಗಳಲ್ಲಿ ಸಾಮಾಜಿಕ ಬದ್ಧತೆ ಕಾಣದಾಗಿದೆ. ಕೆಟ್ಟಿರುವ ಸಮಾಜದ ವ್ಯವಸ್ಥೆ ಬಗ್ಗೆ ಮಾತನಾಡುವಲ್ಲಿ ನಿಷ್ಕ್ರೀಯರಾಗಿದ್ದಾರೆ ಎಂದರು.
ಯಾವುದೇ ಕವನ ಸಾಹಿತ್ಯವಾಗಲಿ ಸ್ವಯಂಪ್ರೇರಿತವಾಗಿ ಅಭ್ಯಾಸ ಮಾಡುವುದರಿಂದ ಮತ್ತು ಅನುಭವದಿಂದ ಮಾತ್ರ ಬರಲು ಸಾಧ್ಯ, ಕಾವ್ಯ ಮತ್ತು ಸಾಹಿತ್ಯಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು. ಕವಿಗಳನ್ನು, ಲೇಖಕರನ್ನು ಓದಿನಲ್ಲಿ ತೊಡಗಿಸುವುದು ಇಂತಹ ಕವಿಗೋಷ್ಠಿಗಳ ಉದ್ದೇಶವಾಗಿದೆ. ಆಧುನಿಕ ಯುಗದಲ್ಲಿ ಎಲ್ಲರೂ ಆಕರ್ಷಣೆಗೆ ಒಳಗಾಗಿರುವುದರಿಂದ ಕವನಗಳನ್ನು ಕೇಳುವವರ ಸಂಖ್ಯೆಯೇ ಕಡಿಮೆಯಾಗಿದೆ ಎಂದು ವಿಷಾದಿಸಿದರು.
ಸಾಹಿತಿ ದೀಪಾ ಗೋನಾಳ ಕೃತಿ ಪರಿಚಯಮಾಡಿದರು. ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 20 ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿ ಎಲ್ಲರ ಗಮನ ಸೆಳೆದರು. ನಾಗರತ್ನ ಚಲವಾದಿ, ವಪೂರ್ಣಿಮಾ , ಗೌತಮ್, ಪ್ರೀತಮ್ಮ ಸಾವಕ್ಕನವರ, ಅಭಿಲಾಷ್ ಬ್ಯಾಡಗಿ, ಬಸವರಾಜ ಸಾವಕ್ಕನವರ, ಶಕುಂತಲಾ. ಎಫ್.ಕೆ. ಸೋಮಣ್ಣ ಲಮಾಣಿ, ಕಸಾಪ ನಿಕಟಪೂರ್ವ ಅಧ್ಯಕ್ಷ ವೀರೇಶ್ ಜಂಬಗಿ, ದೇವರಾಜ ಹುಣಸಿಕಟ್ಟಿ, ಮಾರುತಿ ತಳವಾರ, ದಾಕ್ಷಾಯಣಿ ಉದಗಟ್ಟಿ, ನಾಮದೇವ ಕಾಗದಗಾರ ಮುಂತಾದವರು ಉಪಸ್ಥಿತರಿದ್ದರು.