ಪಾರ್ಥನಹಳ್ಳಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶ್ರೀಮಂತ ಭೂಮಿ ಪೂಜೆ
ಅಥಣಿ 29: ಕಾಗವಾಡ ಕ್ಷೇತ್ರದಲ್ಲಿ 3000 ಕೋಟಿಗೂ ಹೆಚ್ಚು ಅನುದಾನದಲ್ಲಿ ನೀರಾವರಿ, ಶೈಕ್ಷಣಿಕ, ಕೃಷಿ, ಕುಡಿಯುವ ನೀರು, ರಸ್ತೆ ಸೇರಿದಂತೆ ಅನೇಕ ಮೂಲ ಭೂತ ಸೌಲಭ್ಯಗಳನ್ನು ಒದಗಿಸುವ ಕ್ಷೇತ್ರಗಳಲ್ಲಿ ನೂರಾರು ಮಹತ್ವದ ಯೋಜನೆಗಳನ್ನು ಅನುಷ್ಠಾನ ಗೊಳಿಸಿರುವೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಪಾರ್ಥನಹಳ್ಳಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ನಾನು ಶಾಸಕನಾದ ಸಮಯದಲ್ಲಿ ಕಾಗವಾಡ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇತ್ತು, ರಸ್ತೆಗಳು ಹದಗಟ್ಟು ಹೋಗಿದ್ದವು, ಶಾಲೆಗಳಲ್ಲಿ ಮಕ್ಕಳಿಗೆ ಕೊಠಡಿಗಳಿರಲಿಲ್ಲ ಈ ರೀತಿ ಎಲ್ಲ ಕ್ಷೇತ್ರಗಳೂ ಕೂಡ ಅವ್ಯವಸ್ಥೆಯ ಆಗರವಾಗಿದ್ದವು ಎಂದ ಅವರು ನಾನು ಅಧಿಕಾರಕ್ಕೆ ಬಂದ ತಕ್ಷಣ ಜನಪರ ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಕಾಗವಾಡ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿರುವೆ ಎಂದರು.
ಖಿಳೇಗಾಂವ ಬಸವೇಶ್ಚರ ಯೋಜನೆ ಪೂರ್ಣಗೊಂಡಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಚಾಲನೆ ನೀಡಲು ಸಾಧ್ಯವಾಗುವುದಿಲ್ಲ ಎಂದ ಅವರು ಬರಗಾಲ ಖಿಳೇಗಾಂವ ಬಸವೇಶ್ಚರ ಯೋಜನೆ ನೀರು ತಲುಪದ ಗ್ರಾಮಗಳಿಗೆ ನೀರಾವರಿ ಒದಗಿಸುವ ಉದ್ದೇಶದಿಂದ ಕೆರೆ ತುಂಬಿಸುವ ಯೋಜನೆ ಮಂಜೂರಾಗಿ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು.
ಶಾಸಕ ಶ್ರೀಮಂತ ಪಾಟೀಲ ಪಾರ್ಥನಹಳ್ಳಿ ಗ್ರಾಮದಲ್ಲಿ 650 ಲಕ್ಷ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಪಾರ್ಥನಹಳ್ಳಿ ಗ್ರಾಮದ ಪ್ರತಿಯೊಂದು ಮನೆ ಮನೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ 350 ಲಕ್ಷ ವೆಚ್ಚದ ಯೋಜನೆಯಾದ ಜಲಜೀವನ ಮಿಷನ್ ಯೋಜನೆಗೆ, 200 ಲಕ್ಷ ವೆಚ್ಚದ ಪಾರ್ಥನಹಳ್ಳಿ - ಕಿರಣಗಿ ರಸ್ತೆ ಅಭಿವೃದ್ಧಿ ಯೋಜನೆಗೆ, 100 ಲಕ್ಷ ವೆಚ್ಚದ ಪಾರ್ಥನಹಳ್ಳಿ - ಅಬ್ಬಿಹಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಗ್ರಾಮ ಪಂಚಾಯತ ಅಧ್ಯಕ್ಷೆ ರಾಜಶ್ರೀ ಜಾಧವ, ಸದಸ್ಯೆ ರಾಜಶ್ರೀ ಬಡಿಗೇರ, ಧುರೀಣರಾದ ಭಾವುಸಾಹೇಬ ಜಾಧವ, ಹರೀಶ್ ಜಾಧವ, ಬಾಳಕೃಷ್ಣ ಜಾಧವ, ಅಪ್ಪಣ್ಣಾ ಮುಜಗೊಣಿ, ರಾಜು ಚವ್ಹಾಣ, ಧನಪಾಲ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು