ಕಾಗವಾಡ

24 ತೀರ್ಥಂಕರರಿಗೆ 24 ದಂಪತಿಗಳಿಂದ ಏಕಕಾಲಕ್ಕೆ ಪಂಚಾಮೃತ ಅಭಿಷೇಕ

24 ತೀರ್ಥಂಕರರಿಗೆ 24 ದಂಪತಿಗಳಿಂದ ಏಕಕಾಲಕ್ಕೆ ಪಂಚಾಮೃತ ಅಭಿಷೇಕ

ಶೇಡಬಾಳ 27: ಬೆಳಕಿನ ಹಬ್ಬ ದೀಪಾವಳಿ, ಬಲಿಪಾಡ್ಯ ಹಬ್ಬ ಹಾಗೂ ಭಗವಾನ ಮಹಾವೀರ ನಿರ್ವಾಣ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಬುಧವಾರ ದಿ. 26ರಂದು ಶೇಡಬಾಳ ಗ್ರಾಮದ ಶಾಂತಿಸಾಗರ ದಿಗಂಬರ ಜೈನ್ ಮಂದಿರದಲ್ಲಿ 24 ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ, ಪೂಜಾ ಕಾರ್ಯಕ್ರಮಗಳು 24 ದಂಪತಿಗಳು ಕುಟುಂಬ ಸಮೇತರಾಗಿ ಶ್ರದ್ಧಾ ಭಕ್ತಭಾವದಿಂದ ನೆರವೇರಿಸಿದರು. 

ಶೇಡಬಾಳ ಗ್ರಾಮದ ಶಾಂತಿಸಾಗರ ಆಶ್ರಮವು ಜೈನ ಧರ್ಮೀಯರ ಪವಿತ್ರ ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿ 24 ತೀರ್ಥಂಕರರ ಮಂದಿರ, ಭಗವಾನ ಬಾಹುಬಲಿ ಮಂದಿರ, ಸಮೋವಶರನ, ಜಲ ಮಂದಿರ ಹಾಗೂ ಅನೇಕ ಮಂದಿರಗಳ ದೇವರ ದರ್ಶನಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ದಿನಾಲೂ ನೂರಾರು ಭಕ್ತರು ಆಗಮಿಸುತ್ತಾರೆ. ಅಲ್ಲದೇ ಈ ಆಶ್ರಮದಲ್ಲಿ ತ್ಯಾಗಿ ಗಣವು ಹಲವಾರು ಚಾತುರ್ಮಾಸ್ಯಗಳನ್ನು ಆಚರಿಸಿದ್ದಾರೆ.  

ಬಲಿಪಾಡ್ಯಾ ಹಬ್ಬದ ಅಂಗವಾಗಿ 24 ತೀರ್ಥಂಕರರ ಶಿಲಾಮೂರ್ತಿಗಳಿಗೆ ಏಕಕಾಲಕ್ಕೆ 24 ದಂಪತಿಗಳು ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಿದರು. ಹಲವಾರು ದಂಪತಿಗಳು ಈ ಪೂಜಾ ವಿಧಿವಿಧಾನಗಳಲ್ಲಿ ಸಹಯೋಗ ನೀಡಿದರು. ಅಂದು ಬೆಳಗು ಮುಂಜಾನೆ 5 ಗಂಟೆಗೆ ಪ್ರಾರಂಭವಾದ ಪೂಜಾ ವಿಧಿವಿಧಾನಗಳು ಸಾಂಗವಾಗಿ ನೆರವೇರಿದವು. ಆಶ್ರಮದ ಸಂಚಾಲಕ ರಾಜು ಕೇಶವ ನಾಂದ್ರೆ ಇವರ ಮಾರ್ಗದರ್ಶನದಲ್ಲಿ ಪಂಡಿತ ಬಾಹುಬಲಿ ಉಪಾಧ್ಯೆ ಅವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.  

ಆಶ್ರಮದ ಸಂಚಾಲಕ ರಾಜು ನಾಂದ್ರೆ, ಕಾರ್ಯದರ್ಶಿ ಭೂಪಾಲ ಗುರೂಜಿ, ಸುದರ್ಶನ ನರಸಗೌಡರ, ವರ್ಧಮಾನ ಭಯ್ಯಾ, ಮಹಾವೀರ ಗುರೂಜಿ ಸೇರಿದಂತೆ ನೂರಾರು ಶ್ರಾವಕ-ಶ್ರಾವಕಿಯರು ಹಾಜರಿದ್ದರು. 


ಸುದ್ದಿ ಓದಿ