ಪವರ್ ಸ್ಟಾರ್ ಗೆ ಸಚಿವರಿಂದ ಬೆಳ್ಳಿ ಗದೆ
ಬೆಂಗಳೂರು/ಹೊಸಪೇಟೆ, ಅ 20 : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಅರಣ್ಯ ಸಚಿವ ಆನಂದ್ ಸಿಂಗ್ ಬೆಳ್ಳಿ ಗದೆ ನೀಡಿ ಗೌರವಿಸಿದ್ದಾರೆ. ಹೊಸಪೇಟೆಯ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ ಪುನೀತ್ ಅವರನ್ನು ಸ್ವಾಗತಿಸಿದ ಸಚಿವ ಆನಂದ್ ಸಿಂಗ್, ಪುನೀತ್ ರಾಜ್‌ಕುಮಾರ್ ಅವರಿಗೆ ಶಾಲು ಹೊದಿಸಿ, ಬೆಳ್ಳಿ ಗದೆ ನೀಡಿ ಸನ್ಮಾನಿಸಿದ್ದಾರೆ.ಸಚಿವರ ಕುಟುಂಬ ಸದಸ್ಯರ ಜತೆ ಪುನೀತ್ ರಾಜ್‌ಕುಮಾರ್ ಉಪಹಾರ ಸೇವಿಸಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆಂದು ಹೊಸಪೇಟೆಗೆ ಆಗಮಿಸಿದ್ದ ಸಾರಿಗೆ ಸಚಿವ ಲಕ್ಷ್ಮಣ ಸವಧಿ ಸಹ ಹಾಜರಿದ್ದರು.
ಜೇಮ್ಸ್ ಸಿನಿಮಾದ ಚಿತ್ರೀಕರಣಕ್ಕಾಗಿ ಕಳೆದೊಂದು ವಾರದಿಂದ ಬಳ್ಳಾರಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿರುವ ಪುನೀತ್ ರಾಜ್‌ಕುಮಾರ್. ಹೊಸಪೇಟೆ, ಗಂಗಾವತಿ, ಕಮಲಾಪುರ, ಹಂಪಿ ಗಳಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ನಡುವೆ ಬಿಡುವು ಮಾಡಿಕೊಂಡು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಗೂ ಸಹ ಪುನೀತ್ ಭೇಟಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಜೇಮ್ಸ್ ಚಿತ್ರಕ್ಕೆ ತಮಿಳಿನ ಪ್ರಿಯಾ ಆನಂದ್ ನಾಯಕಿಯಾಗಿದ್ದು, ಭರ್ಜರಿ ಚೇತನ್ ಕುಮಾರ್ ಸಾರಥ್ಯವಿದೆ. ಅನು ಪ್ರಭಾಕರ್, ಆದಿತ್ಯ ಮೆನನ್ ಮತ್ತಿತರರು ತಾರಾಗಣದಲ್ಲಿದ್ದಾರೆ.