ಪಿಓಪಿ ತಪಾಸಣೆ; ಗಾಂಧಿ ಚೌಕದಲ್ಲಿ 105 ವಿಗ್ರಹ ಜಪ್ತಿ
ಧಾರವಾಡ,24: ಧಾರವಾಡ ಜಿಲ್ಲೆಯಲ್ಲಿ ಪಿಓಪಿ ಗಣಪತಿ ವಿಗ್ರಹ ನಿರ್ಬಂಧಿಸಿ, ನಿಷೇಧಿಸಲು ಮಹಾನಗರಪಾಲಿಕೆ ಹಾಗೂ ಪೊಲೀಸ್ ಸಹಯೋಗದಲ್ಲಿ ಜಿಲ್ಲಾಡಳಿವು ಬಿಗಿ ಕ್ರಮಕೈಗೊಳ್ಳುತ್ತಿದ್ದು, ವಾರ್ಡ ಮತ್ತು ತಾಲೂಕುಮಟ್ಟದ ಕಾರ್ಯಪಡೆಗಳು ನಿರಂತರವಾಗಿ ತಪಾಸಣೆ ಮಾಡುತ್ತಿವೆ.
ಧಾರವಾಡ ನಗರದ ಗಾಂಧಿ ಚೌಕ ಮತ್ತು ಹೆಬ್ಬಳ್ಳಿ ಅಗಸಿ ರಸ್ತೆಯಲ್ಲಿ ವಾರ್ಡ್ ಕಾರ್ಯಪಡೆ ತಪಾಸಣೆ ಕೈಗೊಂಡಾಗ ಲಕ್ಷ್ಮಣರಾವ್ ಮೋರೆ ಎಂಬುವರು ಮಣ್ಣಿನ ಗಣಪತಿ ಎಂದು ಮಾರಾಟ ಮಾಡುತ್ತಿದ್ದರು. ಅವುಗಳನ್ನು ಪರೀಶೀಲಿಸಿದಾಗ ಕಣ್ಣಿಗೆ ಮಣ್ಣಿನ ಗಣಪತಿ ವಿಗ್ರಹಗಳಂತೆ ಕಂಡರು ಅವು ಪಿಓಪಿ ಮಿಶ್ರಣವಾಗಿರುವ ಸಂಶಯದಿಂದ ಕಾರ್ಯಪಡೆ ಒಂದು ಗಣಪತಿ ವಿಗ್ರಹದ ಮಾದರಿ ಸಂಗ್ರಹಿಸಿ, ಪ್ರಯೋಗಲಾಯಕ್ಕೆ ಕಳಿಸಿ, ರಾಸಾಯನಿಕ ಬಳಸಿ, ತಪಾಸಣೆ ಮಾಡಿತ್ತು. ಅಲ್ಲಿರುವ ಎಲ್ಲ ಗಣಪತಿ ವಿಗ್ರಹಗಳು ಪಿಓಪಿ ಇಂದ ಮಾಡಿದವು ಎಂಬುದು ಪ್ರಯೋಗಾಲಯದ ವರದಿಯಿಂದ ಖಚಿತಪಟ್ಟ ಹಿನ್ನಲೆಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಸುಮಾರು 105 ಪಿಓಪಿ ಗಣಪತಿ ವಿಗ್ರಹಗಳನ್ನು ಕಾರ್ಯಪಡೆ ವಶ ಪಡಿಸಿಕೊಂಡಿದೆ.
ಈ ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಜಗದೀಶ ಐ. ಹೆಚ್., ವಲಯ ಕಛೇರಿ 2 ಸಹಾಯಕ ಆಯುಕ್ತ ಮಹೇಶ್ ಹಾಲಗಿ, ಪರಿಸರ ಅಭಿಯಂತರ ಅವಿನಾಶ್, ಹಿರಿಯ ಆರೋಗ್ಯ ನೀರೀಕ್ಷಕಿಯರಾದ ಪ್ರತಿಮಾ, ಶಾಂತಗೌಡ ಬಿರಾದರ್, ಪೊಲೀಸ್ ಅಧಿಕಾರಿಗಳಾದ ಎಎಸ್ಐ ಎಸ್. ಬಿ.ಹಳ್ಳಿ, ಎಚ್ಎಫ್ ನದಾಫ್ ಭಾಗವಹಿಸಿದ್ದರು.