ಮೈದುಂಬಿ ಹರಿಯುತ್ತಿರುವ ತುಂಗಭದ್ರೆ : ಪ್ರವಾಹ ಭೀತಿ
ಹೂವಿನಹಡಗಲಿ 28 : ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ತಾಲ್ಲೂಕಿನ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ತಾಲ್ಲೂಕಿನ ಮಕರಬ್ಬಿ ಗ್ರಾಮದ ನದಿ ತೀರದಲ್ಲಿನ 30 ಎಕರೆಗೂ ಹೆಚ್ಚು ಪ್ರದೇಶದಲ್ಲಿನ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ನದಿಯ ಒಳ ಹರಿವು ಹೆಚ್ಚುತ್ತಲೇ ಇರುವುದರಿಂದ ಮುಳುಗಡೆಯಾಗಿರುವ ಭತ್ತದ ಬೆಳೆ ಹಾನೀಗೀಡಾಗುತ್ತದೆ ಎಂದು ರೈತರು ಆತಂಕಪಡುತ್ತಿದ್ದಾರೆ. ತಾಲ್ಲೂಕಿನ ರಾಜವಾಳ ಬಳಿ ಇರುವ ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಶನಿವಾರ 1.41 ಲಕ್ಷ ಕ್ಯುಸೆಕ್ ಒಳ ಹರಿವು ದಾಖಲಾಗಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ. ಬ್ಯಾರೇಜ್‌ನ 15 ಗೇಟ್‌ಗಳನ್ನು ತೆರೆದು ನೀರು ಹೊರ ಬಿಡಲಾಗಿದೆ. ಬ್ಯಾರೇಜ್ ಒತ್ತಡವನ್ನು ಸಮಾನಾಂತರವಾಗಿ ಕಾಯ್ದುಕೊಳ್ಳಲು ದಿನದ 24 ಗಂಟೆಯೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರಿಂಗ ರಾಘವೇಂದ್ರ ತಿಳಿಸಿದರು.
ಮದಲಗಟ್ಟಿ ಸುಕ್ಷೇತ್ರದ ಆಂಜನೇಯ ಮುಂಭಾಗ ನದಿ ನೀರು ನುಗ್ಗಿದೆ. ನದಿ ತೀರದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ. ರಭಸದ ಹರಿಯುವಿಕೆ, ಜನವಸತಿಯತ್ತ ನೀರು ತುಂಬಿ ತುಳುಕುತ್ತಿರುವ ಕಾಲುವೆಗಳು ಮತ್ತು ಮದಲಗಟ್ಟಿ ಆಂಜನೇಯ ದೇವಾಲಯ ಮುಂಭಾಗ ಹಗ್ಗ ಕಟ್ಟಿ ನದಿಗೆ ಯಾರೂ ಇಳಿಯದಂತೆ ದೇವಸ್ಥಾನ ಸಮಿತಿಯಿಂದ ಜಾಗೃತಿ ಮೂಡಿಸಲಾಯಿತು. ಮುಂಗಾರು ಆರಂಭದಿಂದಲೂ ತಾಲ್ಲೂಕು ವ್ಯಾಪ್ತಿಯಲ್ಲಿ ದೊಡ್ಡ ಮಳೆ ಸುರಿದಿಲ್ಲ. ಪ್ರತಿದಿನ ತುಂತುರು ಮಳೆಗೆ ಬೆಳೆಗಳು ನಳನಳಸುತ್ತಿವೆ. ಕೆಲ ದಿನಗಳ ಹಿಂದೆ ಸಂಪೂರ್ಣ ತುಂಗಭದ್ರಾ ನದಿ ಸಂಪೂರ್ಣ ಬತ್ತಿ ಆಟದ ಮೈದಾನದಂತಾಗಿತ್ತು. ಇದೀಗ ತುಂಗಭದ್ರಾ ನದಿ ತುಂಬಿ ತುಳುಕತ್ತಿದೆ ಜತೆಗೆ ನದಿ ತೀರದ ಭತ್ತ, ಬಾಳೆ, ಮೆಕ್ಕೆಜೋಳ ಬೆಳೆಗಳು ಹಾನೀಗೀಡಾಗಿವೆ .