ನಿರ್ಮಾಣ ಹಂತದಲ್ಲೇ ಉರುಳಿದ ಅಥಣಿ ಕೆರೆ ತಡೆಗೋಡೆ
ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು
ಅಥಣಿ 2: ಅಥಣಿ ಪಟ್ಟಣದ ಮಧ್ಯ ಭಾಗದಲ್ಲಿರುವ ಐತಿಹಾಸಿಕ ಕರೆಯ ಸುತ್ತ ನಿರ್ಮಿಸುತ್ತಿದ್ದ ತಡೆಗೊಡೆ ಕಾಮಗಾರಿ ಪ್ರಗತಿಯಲ್ಲಿರುವಾಗಲೇ ಕುಸಿದು ಬಿದ್ದಿದೆ.
ಅಥಣಿ ಪಟ್ಟಣದ ಕೆರೆ ಸುತ್ತ ನಿರ್ಮಿಸುತ್ತಿದ್ದ ತಡೆಗೋಡೆ ನಿರ್ಮಾಣ ಹಂತದಲ್ಲೇ ಕುಸಿದಿದ್ದು, ತಡೆಗೋಡೆ ಪಕ್ಕದಲ್ಲಿ ನಿಲಿಸಿದ್ದ ಟಿಪ್ಪರ್ ಸಮೇತವಾಗಿ ಕರೆಗೆ ಉರುಳಿರುವ ಘಟನೆ ನಡೆದಿದೆ. ಅದೃಷ್ಟವಶ್ಯಾತ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನುವುದು ಸಮಾಧಾನವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಅಭಿಯಂತರರನ್ನು ಸಂಪರ್ಕಿಸಲು ಪ್ರಯತ್ನಿಸಿದಲ್ಲಿ ಒಬ್ಬರು ಮೊಬೈಲ್ ಸ್ವಿಚ್ಡ ಆಫ್ ಮಾಡಿದ್ದರೆ ಮತ್ತೊಬ್ಬರು ಮೊಬೈಲ್ ರೀಸಿವ್ ಮಾಡುತ್ತಿಲ್ಲ. ಇದರಿಂದ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಈ ತಡೆಗೊಡೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ ಮತ್ತು ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಘಟನೆ ಕುರಿತು ಮಾತನಾಡಿದ ಸಾಮಾಜಿಕ ಹೋರಾಟಗಾರ ಪ್ರಶಾಂತ ತೋಡಕರ ಮಾತನಾಡುತ್ತಾ ಬಹುನಿರೀಕ್ಷಿತ ಅಥಣಿ ಕೆರೆ ಅಭಿವೃದ್ದಿ ಅಥಣಿ ಭಾಗದ ಕನಸಾಗಿದ್ದು ಸಧ್ಯ ಅಧಿಕಾರಿಗಳ ದವ್ಯ ನಿರ್ಲಕ್ಷ್ಯದಿಂದ ಕಳಪೆ ಕಾಮಗಾರಿ ನಡೆಯುತ್ತಿದ್ದು ಇದಕ್ಕೆ ಸಾಕ್ಷಿಎಂಬಂತೆ ಇವತ್ತು ತಡೆಗೋಡೆ ಬುಡಸಮೇತ ಉರುಳಿಬಿದ್ದಿರುವುದು ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿದರು, ಇದರಲ್ಲಿ ಪುರಸಭೆ ಮುಖ್ಯಾಧಿಕಾರಿ ಸಮೇತ ಎಲ್ಲರ ಕೈವಾಡವಿದೆ, ಜನಸಾಮಾನ್ಯರ ತೆರಿಗೆಯ ದುಡ್ಡು ಈ ರೀತಿ ಅವೈಜ್ಞಾನಿಕವಾಗಿ ಹಾಳುಮಾಡುತ್ತಿದ್ದಾರೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿ, ಅಭಿಯಂತರರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಮತ್ತು ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.