ಸಾರ್ವಜನಿಕರಿಂದ ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ
ಕಾಗವಾಡ 11: ಕಾಗವಾಡ ತಾಲೂಕಿನ ಉಗಾರ ಖುರ್ದ ಪುರಸಭೆಯ ಮುಖ್ಯಾಧಿಕಾರಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಪಟ್ಟಣದಲ್ಲಿ ಕುಡಿಯುವ ನೀರು, ಇನ್ನಿತರ ಮೂಲ ಸೌಕರ್ಯಗಳು ಕಲ್ಪಿಸಲು ಅಧಿಕಾರಿಗಳು, ಚುನಾಯಿತ ಸದಸ್ಯರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಉಗಾರ ಖುರ್ದ ಹಾಗೂ ಫರೀದಖನವಾಡಿ, ವಿನಾಯಕವಾಡಿ ಗ್ರಾಮಗಳ ನೂರಾರು ಸಾರ್ವಜನಿಕರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪರಸಪ್ಪಾ ವೃತ್ತದಿಂದ ಪುರಸಭೆಯ ಕಚೇರಿವರೆಗೆ ಪಾದಯಾತ್ರೆ ನಡೆಸಿದರು.
“ಪುರಸಭೆ ಮುಖ್ಯಾಧಿಕಾರಿ ಕಮಲವ್ವಾ ಭಾಗೋಜಿ ಹಟಾವೊ, ಉಗಾರ ಪಟ್ಟಣ ಬಚಾವೊ” ಎಂದು ಘೋಷಣೆ ಕೂಗುತ್ತಿದ್ದರು. ನಗರ ಮತ್ತು ಚರಂಡಿ ವ್ಯವಸ್ಥೆ ಸರಿಯಾದ ಸಮಯಕ್ಕೆ ಸ್ವಚ್ಛತೆ ಮಾಡುವ ಬಗ್ಗೆ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೂಲ ಸೌಕರ್ಯಗಳನ್ನು ಒದಗಿಸದೆ ನೀರಿನ ಕರ ಹೆಚ್ಚು ಮಾಡಿದ್ದಾರೆ, ಅದನ್ನು ರದ್ದುಗೊಳಿಸಬೇಕು. ಪುರಸಭೆ ಅಧಿಕಾರಿ ಸಾರ್ವಜನಿಕರೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದಾರೆ. ಅವರನ್ನು ಕೂಡಲೆ ವರ್ಗಾಯಿಸಬೇಕೆಂಬ ಬೇಡಿಕೆಗಳ ಮನವಿ ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಇವರಿಗೆ ಮನವಿ ಪತ್ರ ನೀಡಿದರು. ನ್ಯಾಯವಾದಿ ರಾಹುಲ್ ಕಟಿಗೇರಿ ಇವರು ಮನವಿ ಓದಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.
ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಮನವಿ ಸ್ವೀಕರಿಸಿ ಮಾತನಾಡುವಾಗ, ಉಗಾರ ಪುರಸಭೆ ಮುಖ್ಯಾಧಿಕಾರಿ ಕಮಲವ್ವಾ ಭಾಗೋಜಿ ಇವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ ನನಗೆ ಮನವಿ ಅರ್ಪಿಸಿದ್ದಾರೆ. ಈ ಮನವಿ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಉಗಾರ ಪುರಸಭೆ ಅಧ್ಯಕ್ಷ ಮಂಜುನಾಥ ತೇರದಾಳೆ ಮಾತನಾಡಿ, ಉಗಾರ ಗ್ರಾಮದ ಸಾರ್ವಜನಿಕರು ಮುಖ್ಯಾಧಿಕಾರಿಗಳ ಬಗ್ಗೆ ಮಾಡಿರುವ ಆರೋಪ ಸತ್ಯವಿದೆ. ಅಧ್ಯಕ್ಷ ಸಹಿತ ಎಲ್ಲ ಸದಸ್ಯರು ಇದಕ್ಕೆ ನಮ್ಮ ಬೆಂಬಲವಿದೆ. ಅಧಿಕಾರಿ ಕಮಲವ್ವಾ ಭಾಗೋಜಿ ಇವರು ಸರ್ವಾಧಿಕಾರಿಗಳಾಗಿ ವರ್ತಿಸುತ್ತಿದ್ದು, ಪಟ್ಟಣದಲ್ಲಿಯ ಮೂಲಭುತ ಸೌಕರ್ಯಗಳು ನೀಡಲು ಅಸಹಾಯರಾಗಿದ್ದಾರೆ. ಇಲ್ಲಿಯ ಜನರ ಬೇಡಿಕೆಗಳು ಈಡೆಯರಿಸಲು ನಾವು ಅಸಹಾಯರಾಗಿದ್ದೇವೆ. ಈ ಪುರಸಭೆಗೆ ಕೆ.ಎಂ.ಎಸ್ ಪದವಿ ಹೊಂದಿರುವ ಅಧಿಕಾರಿ ನೇಮಕಾತಿ ಮಾಡಬೇಕೆಂದು ಕೇಳಿಕೊಂಡಿದ್ದೇವೆ. ಇಲ್ಲಿಯ ಅಧಿಕಾರಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದು, ನಮಗೆ ತಪ್ಪು ದಾರಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.