ಇಂಡಿ

ಹೋರ್ತಿ ಠಾಣೆ ಪಿಎಸ್‌ಐ ವಿರುದ್ಧ ಜನಾಕ್ರೋಶ: ಪ್ರತಿಭಟನೆ

ಹೋರ್ತಿ ಠಾಣೆ ಪಿಎಸ್‌ಐ ವಿರುದ್ಧ ಜನಾಕ್ರೋಶ: ಪ್ರತಿಭಟನೆ

ಇಂಡಿ 23: ತಾಲೂಕಿನ ಹೋರ್ತಿ ಪೋಲಿಸ್ ಠಾಣೆ ಪಿಎಸ್‌ಐ ಸೀತಾರಾಮ ಲಮಾಣಿ ಅವರ ವಿರುದ್ಧವೇ ಪ್ರತಿಭಟನೆ ಇಳಿದ ರೈತರು. ಹೌದು. ಏಕೆ ಅಂತಾ ತಮಗೆ ಕೂತುಹಲ ಆಗಿರಬಹುದು. ಇಂಡಿ ತಾಲೂಕಿನ ಹೋರ್ತಿ ರೇವಣಸಿದ್ಧೇಶ್ವರ ದೇವಸ್ಥಾನದ ಕಮೀಟಿ ಅಧ್ಯಕ್ಷ ಅಣ್ಣಪ್ಪ ಖೈನೂರ ಅವರ ನೇತೃತ್ವದಲ್ಲಿ ಹೋರ್ತಿ ರಾಷ್ಟ್ರೀಯ ಹೆದ್ದಾರಿ 50ರ ಬಳಿ ಇರುವ ಬೀರಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅಣಪ್ಪ ಖೈನೂರ ಹಾಗೂ ನೂರಾರು ಜನರು ಕೂಡಿ ಹೋರ್ತಿ ಪೋಲಿಸ್ ಠಾಣೆಯ ಪಿಎಸ್‌ಐ ಸೀತಾರಾಮ ಲಮಾಣಿ ಅವರ ವಿರುದ್ಧ ಧಿಕ್ಕಾರ ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಪೋಲಿಸ್ ಠಾಣೆ ಆವರಣದಲ್ಲಿ ಕೆಲ ಹೊತ್ತು ಪ್ರತಿಭಟನೆ ಮಾಡಿದರು. 

ಇಂಡಿ ಸಿಪಿಐ ಎಂ ಎಂ ಡಪ್ಪಿನ ಹಾಗೂ ಪ್ರತಿಭಟನೆ ನಿರತ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಇಂಡಿ ಡಿವೈಎಸ್ಪಿ ಎಚ್ ಎಸ್ ಜಗದೀಶ ಅವರು ಆಗಮಿಸಿ ಧರಣಿ ನಿರತರ ಸಮಸ್ಯೆ ಆಲಿಸಿದರು. ನಂತರ ಮಾತನಾಡಿದ ಅಣ್ಣಪ್ಪ ಖೈನೂರ ಅವರು ಹೋರ್ತಿ ಪೋಲಿಸ್ ಠಾಣೆ ಪಿಎಸ್‌ಐ ಸೀತಾರಾಮ ಲಮಾಣಿ ಅವರು ಸಾರ್ವಜನಿಕರ ವಿವಿಧ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಹಾಗೂ ಕಳ್ಳರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಿಫಲರಾಗಿದ್ದಾರೆ. ಹೋರ್ತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತಿ ಗ್ರಾಮಗಳಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗಿವೆ, ಪ್ರತಿ ಹಳ್ಳಿಗಳಲ್ಲಿ ಕೆಲವು ಅಂಗಡಿ ಹಾಗೂ ಪಾನ್ ಶಾಪ್‌ಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಹಾಗೂ ಒಸಿ,ಮಟ್ಕಾ, ಜೂಜಾಟಗಳ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಮಾಹಿತಿ ಇದ್ದರು ಕೂಡಾ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.ಡಿವೈಎಸ್ಪಿ ಜಗದೀಶ ಅವರು ಈ ಕುರಿತು ಎಸ್ ಪಿ ಅವರ ಗಮನಕ್ಕೆ ತಂದು ಪಿಎಸ್‌ಐ ಸೀತಾರಾಮ ಲಮಾಣಿ ಅವರ ಮೇಲೆ ಹಾಗೂ ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಯಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಎರಡೂ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪ್ರತಿಭಟನೆಕಾರರು ಹೇಳಿದರು.ರಮೇಶ ಬೋಸಲೆ, ಆರ್ ಜಿ ಪಾಟೀಲ, ಅಣ್ಣಪ್ಪಗೌಡ ಬಿರಾದಾರ, ರಮಾಕಾಂತ್ ಬಿರಾದಾರ, ಎಸ್ ಎಸ್ ಶಿವೂರ, ಮಲ್ಲೇಶಿ ಅಳ್ಳೊಳ್ಳಿ, ಅಮಸಿದ್ದಪ್ಪ ಲೋಣಿ, ಗಂಗಾರಾಮ ಬೊಸಗಿ ಸೇರಿದಂತೆ ನೂರಾರು ರೈತರು ಉಪಸ್ಥಿತರಿದ್ದರು. 


ಸುದ್ದಿ ಓದಿ