ಹತ್ತನೇ ತರಗತಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವತ್ತ ನಮ್ಮ ಪ್ರಯತ್ನ : ಜಿಲ್ಲಾಧಿಕಾರಿ ದಿವ್ಯ ಪ್ರಭ
ಧಾರವಾಡ 18 : ವಿದ್ಯಾಕಾಶಿ ಎಂದೇ ಕರೆಸಿಕೊಳ್ಳುವ ಧಾರವಾಡ ಜಿಲ್ಲೆಯನ್ನು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ನಂಬರ ಒನ್ ಸ್ಥಾನಕ್ಕೆ ತರುವ ಮೂಲಕ ಹೆಸರಿಗೆ ತಕ್ಕಂತೆ ವಿದ್ಯಾಕಾಶಿ ಮಾಡುವ ಪ್ರಯತ್ನವನ್ನು ಜಿಲ್ಲಾಡಳಿತ ಆರಂಭಿಸಿದೆ. ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು, ಪರೀಕ್ಷಾ ತರಬೇತಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಕೈ ಜೊಡಿಸಿದ್ದು, ಎಲ್ಲರ ಸಹಕಾರ, ಪ್ರಯತ್ನದಿಂದ ಗುರಿ
ಸಾಧಿಸುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿದ್ಯಾಕಾಶಿ ಮಾಡುವತ್ತ ಧಾರವಾಡ ಜಿಲ್ಲಾಡಳಿತದ ಚಿತ್ತ ಎಂಬ ಸಂಕಲ್ಪದೊಂದಿಗೆ ಧಾರವಾಡದ ಹಿರಿಯ ಶಿಕ್ಷಣ ತಜ್ಞರು, ಖಾಸಗಿ
ತರಬೇತಿ ಸಂಸ್ಥೆಗಳ ಮುಖ್ಯಸ್ಥರು, ಜಿಲ್ಲಾ ಶೈಕ್ಷಣಿಕ ತರಬೇತಿ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಕುರಿತು ಸಮಾಲೋಚನೆ ಹಾಗೂ ಕ್ರಿಯಾಯೋಜನೆ ರೂಪಿಸುವದಕ್ಕಾಗಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕಳೆದ ವರ್ಷದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 72.67 ರಷ್ಟು ಸಾಧನೆ ಮಾಡುವ ಮೂಲಕ ಧಾರವಾಡ ಜಿಲ್ಲೆ 22ನೇ ಸ್ಥಾನ ಪಡೆದಿದೆ. ಜಿಲ್ಲೆಯ 495 ಪ್ರೌಢಶಾಲೆಗಳ ಪೈಕಿ ಮೂರು ಶಾಲೆಗಳು ಶೂನ್ಯ ಸಂಪಾದನೆ ಮಾಡಿದ್ದು, 30 ಶಾಲೆಗಳು ಶೇ. 100 ರಷ್ಟು ಸಾಧನೆ ಮಾಡಿವೆ ಎಂದು ಅವರು ಹೇಳಿದರು. ಇಲ್ಲಿಯವರೆಗೆ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳು ಸೇರಿ ಪ್ರಸಕ್ತ ವರ್ಷ ಒಟ್ಟು 32,870 ವಿದ್ಯಾರ್ಥಿಗಳು ಹತ್ತನೇ ವರ್ಗಕ್ಕೆ ಪ್ರವೇಶ ಪಡೆದಿದ್ದಾರೆ ಮತ್ತು 8ನೇ ವರ್ಗಕ್ಕೆ 33,494, 9ನೇ ವರ್ಗಕ್ಕೆ 33,218 ಮಕ್ಕಳು ಸೇರಿ ಪ್ರೌಢಶಾಲೆಗಳಿಗೆ ಒಟ್ಟು 99,582 ಮಕ್ಕಳು ಇಲ್ಲಿವರೆಗೆ ಪ್ರವೇಶ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ರಸಕ್ತ ವರ್ಷ 10 ನೇ ತರಗತಿಗೆ ದಾಖಲಾಗಿರುವ ಮಕ್ಕಳಲ್ಲಿನ ಕಲಿಕೆಯ ಗತಿಯನ್ನು ಗುರುತಿಸಲು ಸೇತು ಬಂಧು ಕಾರ್ಯಕ್ರಮದಡಿ ಪರೀಕ್ಷೆಯನ್ನು ಜರುಗಿಸಲಾಗಿತ್ತು. ಒಟ್ಟು ಹತ್ತನೇ ವರ್ಗದ ಮಕ್ಕಳ ಪೈಕಿ 8,237 ವಿದ್ಯಾರ್ಥಿಗಳು ಕಲಿಕೆಯಲ್ಲಿ ನಿಧಾನಗತಿಯಲ್ಲಿದ್ದು, ಹಿಂದುಳಿದಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ, ಅವರನ್ನು ಸಾಮಾನ್ಯ ವಿದ್ಯಾರ್ಥಿಗಳಂತೆ ಸುಧಾರಿಸಿ ಈ ಸಲದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡುವ ಚಾಲೆಂಜ್ ನಮ್ಮ ಮುಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು, ಪರಿಣಿತರು, ಶಾಲಾ ಅಭಿವೃದ್ಧಿ ಸಮಿತಿಯವರ ಸಹಕಾರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. ಮಕ್ಕಳಲ್ಲಿ ಓದುವ ಭರವಸೆ ಮೂಡಿಸುವ ಅಗತ್ಯವಿದೆ. ಓದಿನಲ್ಲಿ ಮಕ್ಕಳು ಹಿಂದುಳಿಯಲು ಶಿಕ್ಷಕರು ಮಾತ್ರ ಕಾರಣರಲ್ಲ, ಅದರ ಹೊಣೆಯನ್ನು ಪಾಲಕರು ಸೇರಿದಂತೆ ಎಲ್ಲರೂ ವಹಿಸಿಕೊಳ್ಳಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದು, ಅವರ ಉತ್ತಮ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಅವರು ಹೇಳಿದರು.
ಪ್ರತಿ ಮಗು ಶಾಲೆಯಲ್ಲಿರಬೇಕು. ಈ ಕುರಿತು ಶಿಕ್ಷಣ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಮಕ್ಕಳು ಶಾಲೆಗೆ ದಾಖಲಾಗಿಯೂ ಕ್ಲಾಸ್‌ಗೆ ಬರದಿದ್ದರೆ ಶಿಕ್ಷಕರನ್ನು ಮತ್ತು ಶಾಲಾ ಮುಖ್ಯಸ್ಥರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಪ್ರತಿ ವಿದ್ಯಾರ್ಥಿಯ ಕಲಿಕೆಯ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸಬೇಕೆಂದು ಅವರು ತಿಳಿಸಿದರು. ಕಲಿಕೆಯಲ್ಲಿ ನಿಧಾನಗತಿಯಲ್ಲಿರುವ ಮಕ್ಕಳನ್ನು ಗುರುತಿಸಿ ಎರಡಮೂರು ಜನರಿಗೆ ಒರ್ವ ಶಿಕ್ಷಕರನ್ನು ಮತ್ತು ಅಂತಹ ಒಂದು ಶಾಲೆಗೆ ಒರ್ವ ನೊಡಲ್ ಅಧಿಕಾರಿಯನ್ನು ನೇಮಿಸಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬೆಸ್ಟ ಟೀಚರ್ ಪುರಸ್ಕಾರ: ನಿಧಾನಗತಿಯ ಮಕ್ಕಳಲ್ಲಿನ ಓದು ಬರಹದಲ್ಲಿ ಬದಲಾವಣೆ ತರುವ, ಉತ್ತಮ ಪ್ರಗತಿ ಸಾಧಿಸುವ ಶಿಕ್ಷಕರಿಗೆ ಬೆಸ್ಟ್ ಟೀಚರ್ ಪುರಸ್ಕಾರ ನೀಡಿ, ಜಿಲ್ಲಾಡಳಿತದಿಂದ ಗೌರವಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮನೆ ಪಾಠ, ಓಣಿ ಓದು, ವಾರ್ಡಿಗೊಂದು ಓದಿನ ಮನೆ: ಮಕ್ಕಳ ವಿದ್ಯಾಭ್ಯಾಸದಲ್ಲಿ ಮತ್ತು ಪ್ರಸಕ್ತ ವರ್ಷದ ಫಲಿತಾಂಶದಲ್ಲಿ ಶೇ. 100 ರಷ್ಟು ಗುರಿ ಸಾಧಿಸಲು ತಜ್ಞರ, ಶಿಕ್ಷಕರ ಸಹಕಾರದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಡಳಿತ ಸನ್ನದ್ಧವಾಗುತ್ತಿದೆ.
ಶಾಲಾ ಶಿಕ್ಷಕರಿಂದ ಗ್ರಾಮೀಣ ಭಾಗದಲ್ಲಿ ಮನೆಪಾಠ, ಓಣಿ ಓದು ಕಾರ್ಯಕ್ರಮಗಳ ಮೂಲಕ ಶಾಲಾ ನಂತರದ ಅವಧಿಯಲ್ಲೂ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿ ವಾರ್ಡಿಗೊಂದು ಓದಿನ ಮನೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ, ವಿಶೇಷ ವರ್ಗ ಮಾಡಲಾಗುತ್ತದೆ. ಈ ಕುರಿತು ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿ, ರೂಪರೇಷೆ ಅಂತಿಮಗೊಳಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಡಿಸಿ ವಿತ್ ಡೆ ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ: ವಿದ್ಯಾರ್ಥಿಗಳಲ್ಲಿ ಸ್ಪರ್ಧಾಮನೋಭಾವ, ಆತ್ಮಸ್ಥೈರ್ಯ, ಸಾಧನೆ ಛಲ ಮತ್ತು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ, ಹುಮ್ಮಸ್ಸು ಮೂಡಿಸಲು ಡಿಸಿ ವಿತ್ ಡೆ- ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮವನ್ನು ಬರುವ ತಿಂಗಳಿನಿಂದ ಪ್ರತಿ ತಿಂಗಳು ಜಿಲ್ಲಾಡಳಿತದಿಂದ ಆಯೋಜಿಸಲು ನಿರ್ಧರಿಸಲಾಗಿದೆ. ಡಿಸಿ ವಿತ್ ಡೆ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಇಲಾಖೆಯ 10 ನೇ ವರ್ಗದ 10 ವಿದ್ಯಾರ್ಥಿಗಳನ್ನು ಮತ್ತು ಪಿಯುಸಿ ದ್ವಿತೀಯ ವಿಭಾಗದಲ್ಲಿ ಓದುತ್ತಿರುವ 10 ಮಕ್ಕಳನ್ನು ಪ್ರತಿ ತಿಂಗಳು ಅವರ ಓದು, ಪರೀಕ್ಷೆ ಫಲಿತಾಂಶ, ಶಾಲಾ ಹಾಜರಾತಿಯೊಂದಿಗೆ ತಜ್ಞರು ರೂಪಿಸುವ ಶೈಕ್ಷಣಿಕ ಮಾನದಂಡಗಳ ಆಧಾರದ ಮೇಲೆ ಆಯ್ಕೆ ಸಮಿತಿಯಿಂದ ಗುರುತಿಸಿ ಆಯ್ಕೆ ಮಾಡಲಾಗುತ್ತದೆ.
ಆಯ್ಕೆಯಾದ ಮಕ್ಕಳೊಂದಿಗೆ ಜಿಲ್ಲಾಧಿಕಾರಿಗಳು ಸಾಧನೆ, ಶಿಕ್ಷಣ, ಪಠ್ಯೇತರ ಚಟುವಟಿಕೆಗಳ ಕುರಿತು ಸಂವಾದ ನಡೆಸಿ, ಜಿಲ್ಲಾಧಿಕಾರಿಗಳ ಮನೆಯಲ್ಲಿಯೇ ಅವರೊಂದಿಗೆ ಊಟ ಮಾಡುತ್ತಾರೆ. ವಿಶೇಷ ಸಾಧಕ ಅತಿಥಿಗಳನ್ನು ಆಹ್ವಾನಿಸಿ, ವಿದ್ಯಾರ್ಥಿಗಳಿಗೆ ಪರಿಚಯಿಸಿ, ಅವರ ಸಾಧನೆಗೆ ಪ್ರೇರಣೆ ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳ ಕಚೇರಿ ಭೇಟಿ, ಗ್ರೂಪ್ ಫೋಟೊದೊಂದಿಗೆ ವಿದ್ಯಾರ್ಥಿಗಳಿಗೆ ಅಂದಿನ, ಡಿಸಿ ವಿತ್ ಡೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾಮನೋಭಾವ, ಓದಿನಲ್ಲಿ ಆಸಕ್ತಿ, ಸಾಧನೆ, ಛಲ ಮೂಡಿಸಲು ಪ್ರಯತ್ನಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಶಿಕ್ಷಕರಿಗೆ ವಿಶೇಷ ತರಬೇತಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶಾಲೆಗಳು ಸೇರಿದಂತೆ ವಿವಿಧ ಶಾಲೆಗಳ ಗಣಿತ, ವಿಜ್ಞಾನ, ಇಂಗ್ಲೀಷ ವಿಷಯಗಳ ಶಿಕ್ಷಕರಿಗೆ ಉತ್ತಮ ತರಬೇತಿದಾರರಿಂದ ಮತ್ತು ಶಿಕ್ಷಣ ತಜ್ಞರಿಂದ ಕಾಲಕಾಲಕ್ಕೆ ತರಬೇತಿ ನೀಡಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ಮಾಜಿ ನಿರ್ದೇಶಕ ಹಾಗೂ ಧಾರವಾಡ ಐಐಟಿ ಡೀನ್ ಪ್ರೋ. ಎಸ್.ಎಂ.ಶಿವಪ್ರಸಾದ ಅವರು ಮಾತನಾಡಿ, ಫಲಿತಾಂಶ ಸುಧಾರಣೆಗೆ ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ತರಬೇತಿ ಮೂಲಕ ಓದು, ಕಲಿಕೆಯ ಕೌಶಲ್ಯ ಬೆಳಸಬೇಕು. ಯೋಜನಾ ಬದ್ಧವಾಗಿ ವಿವಿಧ ಸಮಿತಿ ರಚಿಸಿಕೊಂಡು ಕಾರ್ಯಸಾಧನೆ ಮಾಡಬಹುದು ಎಂದರು. ನುರಿತ ತರಬೇತಿ ತಜ್ಞ ಮಹೇಶ ಮಾಶ್ಯಾಳ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಹೆಚ್ಚು ಪೊಕಸ್ ಮಾಡುವ ಮೂಲಕ ವಿಶೇಷ ತರಗತಿಗಳನ್ನು ಮಾಡಬೇಕು. ಶಿಕ್ಷಕರನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕು. ಇದಕ್ಕೆ ಅಗತ್ಯವಿರುವ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಶಿಕ್ಷಣ ತಜ್ಞ ವಿನಾಯಕ ಜೋಶಿ, ಪಾಟೀಲ ಟ್ಯೂಶನ್ ಕ್ಲಾಸಸ್ ಪ್ರಾಚಾರ್ಯ ಬಸವರಾಜ ಪಾಟೀಲ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಕೆ.ಪಿ, ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಎಸ್.ಎಸ್.ಕೆಳದಿಮಠ, ಡೈಟ್‌ನ ಪ್ರಾಚಾರ್ಯೆ ಜಯಶ್ರೀ ಕಾರೇಕರ, ಜಿಲ್ಲಾ ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ. ಭೀಮಪ್ಪ. ಎಂ.ಎನ್., ಎಸ್.ಎಸ್.ಎಲ್.ಸಿ ಜಿಲ್ಲಾ ಕೊರ್ಡಿನೆಟರ್ ರವಿಕುಮಾರ ಬಾರಾಟಕ್ಕೆ, ಡಯಟ್‌ನ ಹಿರಿಯ ಉಪನ್ಯಾಸಕ ಎ.ಎ.ಖಾಜಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಎಪಿಸಿಓ ಎಸ್.ಎನ್.ಕಳಸಣ್ಣವರ ಭಾಗವಹಿಸಿ ಎಸ್.ಎಸ್.ಎಲ್.ಸಿ ಪರೀಕ್ಷೆ ಸುಧಾರಣೆಗೆ ಸಲಹೆ, ಸೂಚನೆ ಹಾಗೂ ತಮ್ಮ ಕರ್ತವ್ಯದ ಕುರಿತು ಮಾತನಾಡಿದರು.
ಸಭೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಶಾಲಾ ಮುಖ್ಯಸ್ಥರು, ಶಿಕ್ಷಣ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.