ಗುಳೇಗುಡ್ಡ

ಶಿಕ್ಷಣ ಸಂಸ್ಕಾರ ನೀಡಿದ ಮಠ ಒಪ್ಪತ್ತೇಶ್ವರ ಮಠ : ಶಾಸಕ ಚರಂತಿಮಠ

ಶಿಕ್ಷಣ ಸಂಸ್ಕಾರ ನೀಡಿದ ಮಠ ಒಪ್ಪತ್ತೇಶ್ವರ ಮಠ : ಶಾಸಕ ಚರಂತಿಮಠ
ಪಟ್ಟಣದ ಒಪ್ಪತ್ತೇಶ್ವರ ಮಠದಲ್ಲಿ 11 ಮಕ್ಕಳಿಗೆ ಅಯ್ಯಾಚಾರ ಹಾಗೂ ಲಿಂಗದೀಕ್ಷಾ ಕಾರ್ಯಕ್ರಮ ನಡೆಯಿತು.

ಗುಳೇದಗುಡ್ಡ 13 : ಒಪ್ಪತ್ತೇಶ್ವರ ಮಠವು ಈ ಭಾಗದಲ್ಲಿ ಧಾರ್ಮಿಕತೆ ಆಧ್ಯಾತ್ಮಿಕ ಭೊದನೆ ಮಾಡುವದರ ಜೊತೆಗೆ  ಸಾಮಾಜಿಕ ಶೈಕ್ಷಣಿಕ ಕ್ರಾಂತಿ ಮಾಡಿದ ಮಠವಾಗಿದೆ. ನಾನು ಚಿಕ್ಕವನಾಗಿದ್ದಾಗಿಂದ ಈ ಮಠಕ್ಕೆ ನಡೆದುಕೊಳ್ಳುತ್ತ ಬಂದಿದ್ದೇನೆ. ಭಕ್ತರಿಗೆ ಆಧ್ಯಾತ್ಮದ ಜ್ಞಾನ ನೀಡಿದ ಮಠವಾಗಿದೆ ಎಂದು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹೇಳಿದರು. 

ಅವರು ಸೋಮವಾರ ಪಟ್ಟಣ ಒಪ್ಪತ್ತೇಶ್ವರ ಮಠದ ನವೀಕೃತ ಕಟ್ಟಡದ ಉದ್ಘಾಟನೆ ಹಾಗೂ ಶ್ರೀಗಳ ಪಟ್ಟಾಧಿಕಾರ ರಜತ ಮಹೋತ್ಸವ, ಕಾರ್ತಿಕೋತ್ಸವ, ಜನ್ಮಸುವರ್ಣಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಮಠವು ಹಿಂದಿಗಿಂತಲೂ ಸಾಕಷ್ಟು ಅಭಿವೃದ್ಧಿಯಾಗಿದೆ. ಅಭಿನವ ಒಪ್ಪತ್ತೇಶ್ವರ ಶ್ರೀಗಳು  ಪಟ್ಟಾಧಿಕಾರದ ಮಠವನ್ನು ಇನ್ನಷ್ಟು ಬೆಳೆಸಿದ್ದಾರೆ ಎಂದರು. 

ಮಾಜಿ ಶಾಸಕ ಎಸ್‌.ಜಿ.ನಂಜಯ್ಯನಮಠ ಮಾತನಾಡಿ, ಒಪ್ಪತ್ತೇಶ್ವರ ಮಠವು ಆಧ್ಯಾತ್ಮ ಕೇಂದ್ರವಾಗಿದ್ದು, ಭಕ್ತರಿಗೆ ಉತ್ತಮ ಸಂಸ್ಕಾರ ಆಚಾರ-ವಿಚಾರ ನೀಡುತ್ತ ಬಂದಿದೆ. ಈ ಭಾಗದಲ್ಲಿ ಆಧ್ಯಾತ್ಮದ ಜ್ಞಾನವನ್ನು ನೀಡಿದ ಮಠವಾಗಿದೆ ಎಂದರು. ಹುಬ್ಬಳ್ಳಿ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮಿಗಳು, ಎರೆಡೆತ್ತಿನ ಮಠದ ಸಿದ್ದಲಿಂಗ ಶ್ರೀಗಳು, ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು, ಕೈಲಾಸಪತಿ ಸ್ವಾಮಿಗಳು, ಗುರಗುಂಟಾದ ಸದಾನಂದ ಶಿವಾಚಾರ್ಯ ಶ್ರೀಗಳು, ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು, ಕೆಳದಿಯ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿಗಳು ಜಿಗೇರಿ ಹಿರೇಮಠದ ಗುರುಸಿದ್ದೇಶ್ವರ ಶ್ರೀಗಳು, ಅಕ್ಕಲಕೋಟೆ ಚಿಕ್ಕರೇವಣಸಿದ್ದ ಶ್ರೀಗಳು ಸಾನಿಧ್ಯ ವಹಿಸಿದ್ದರು.  

ಮಹಾಂತೇಶ ಹಿರೇಮಠ, ರಂಗಾಪೂರ, ತಿಪ್ಪಣ್ಣ ಗೌಡರ ಗಣೇಶ ಶಾಸ್ತ್ರೀಗಳು, ಶಿವು ಹಿರೇಮಠ ಸೇರಿದಂತೆ ಇತರರು ಇದ್ದರು. ಇದೇ ಸಂದರ್ಭದಲ್ಲಿ ಶ್ರೀಮಠದ ಹಿಂದಿನ ಶ್ರೀಗಳ ಭಾವಚಿತ್ರ ಹಾಗೂ ಸಾಧಕರ ಭಾವಚಿತ್ರಗಳನ್ನು ನವಲಗುಂದ ಗವಿಮಠದ ಬಸವಲಿಂಗ ಶ್ರೀಗಳು ಅನಾವರಣಗೊಳಿಸಿದರು. ನೂರಾರು ಮಹಿಳೆಯರಿಗೆ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಹಾಗೂ ಕಾರ್ತಿಕೋತ್ಸವದ ನಿಮಿತ್ತ ಮುತ್ತೈಯ್ಯದರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆಯಿಂದ ಮಹಿಳೆಯರು ಭಕ್ತಿ ಭಾವದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಡಿ ತುಂಬುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  

ಲಿಂಗದೀಕ್ಷೆ, ಅಯ್ಯಾಚಾರ: ಇದೇ ಸಂದರ್ಭದಲ್ಲಿ 11 ಮಕ್ಕಳಿಗೆ ಅಯ್ಯಾಚಾರ ಹಾಗೂ ಲಿಂಗದೀಕ್ಷಾ ಕಾರ್ಯಕ್ರಮ ನಡೆಯಿತು. ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗ ದೀಕ್ಷೆ ಅಯ್ಯಾಚಾರ ಕಾರ್ಯಕ್ರಮ ನಡೆಸಿಕೊಟ್ಟರು. ಬೆಳಿಗ್ಗೆ 14ನೇ ಒಪ್ಪತ್ತೇಶ್ವರ ಮಹಾಸ್ವಾಮಿಗಳ 146ನೇ ಜಯಂತಿ ಕಾರ್ಯಕ್ರಮ, ರೇವಣಸಿದ್ದ ಶ್ರೀಗಳ 23ನೇ ಪುಣ್ಯಸ್ಮರಣೋತ್ಸವ ಹಾಗೂ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆದವು.  

ಸುದ್ದಿ ಓದಿ