ಆನ್ಲೈನ್ ವಿಚಾರ ಸಂಕಿರಣ
ಧಾರವಾಡ,01: ಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮ ಘಟ್ಟದ ಮೇಲೆ ಆಗುತ್ತಿರುವ ಅಕ್ರಮಣಗಳಿಂದ ಕೇವಲ ಮತ ನೀಡುವ ಮತ್ತು ಮಾತನಾಡುವ ಜೀವಿಗಳಿಗಲ್ಲದೇ, ಮತನೀಡದ ಮಾತನ್ನೂ ಆಡದ ಅಸಂಖ್ಯಾತ ಜೀವ ಸಂಕುಲಕ್ಕೆ ದೊಡ್ಡ ಆಪತ್ತು ಬಂದೊದಗಿದೆ. ಈಗ ಪಶ್ಚಿಮ ಘಟ್ಟವನ್ನು ರಕ್ಷಿಸಲು ಪ್ರತಿಯೊಬ್ಬರೂ ಮುಂದಾಗಬೇಕು. ನಾಡಿನ ಜನತೆಯನ್ನು ಈ ಹೋರಾಕ್ಕೆ ಪ್ರೇರೇಪಿಸಬೇಕು ಎಂದು ನಾಡಿನ ಹೆಸರಾಂತ ಪರಿಸರವಾದಿಗಳು ಮತ್ತು ವಿಜ್ಞಾನ ಅಂಕಣಕಾರರಾದ ನಾಗೇಶ್ ಹೆಗಡೆ ಅವರು ಹೇಳಿದರು.
ಆಗಸ್ಟ್ 31 ರಂದು ಎಐಡಿವೈಒ ಕರ್ನಾಟಕ ರಾಜ್ಯ ಸಮಿತಿಯು ಬಿಕ್ಕಟ್ಟಿನ ಘಟ್ಟದಲ್ಲಿ ಪಶ್ಚಿಮ ಘಟ್ಟ ಎಂಬ ವಿಚಾರದ ಕುರಿತು ಹಮ್ಮಿಕೊಂಡಿದ್ದ ವೆಬಿನಾರ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪಶ್ಚಿಮ ಘಟ್ಟದ ಸಂರಕ್ಷಣೆಯ ಬಗ್ಗೆ ನಾವು ಬಹಳ ಹಿಂದಿನಿಂದಲೂ ಮಾತನಾಡುತ್ತಿದ್ದೇವೆ, ಆದರೆ ಈಗ ಭೂಮಿಯೇ ಮಾತನಾಡಲು ಪ್ರಾರಂಭಿಸಿದೆ. ಇತ್ತೀಚಿಗೆ ಶಿರೂರ್, ವಯನಾಡ್, ಶಿರಾಡಿಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ಸಂಭವಿಸಿದ ಅನಾಹುತಗಳು ಭೂಮಿಯೇ ತನ್ನ ಒಡಲ ಆಕ್ರೋಶವನ್ನು ಹೊರಹಾಕುತ್ತಿದೆಯೇನೊ ಎಂಬಂತೆ ಘಟಿಸಿವೆ ಎಂದರು.
ಪಶ್ಚಿಮ ಘಟ್ಟಗಳು ಕೇವಲ ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಪ್ರಾಕೃತಿಕ ಸಮತೋಲನವನ್ನು ಕಾಪಾಡುವಲ್ಲಿ ಬಹು ಮಹತ್ತರವಾದ ಪಾತ್ರ ನಿರ್ವಹಿಸುತ್ತಿವೆ. ಆದರೆ ಅಂತಹ ಪ್ರದೇಶದಲ್ಲಿ ಜನಪರ ಕಾಳಜಿ ಇಲ್ಲದೆ, ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಒದಗಿಸುವತ್ತ ಗಮನವಿಲ್ಲದೆ, ಕೇವಲ ಕಾರ್ೋರೇಟ್ ಮನೆತನಗಳಿಗೆ, ಕಾಂಟ್ರ್ಯಾಕ್ಟ್ ಕುಳಗಳಿಗೆ ನೆರವಾಗುವ ಅಪಾಯಕಾರಿ ಕಾರ್ಖಾನೆಗಳು, ಕಾರಿಡಾರ್ ರಸ್ತೆಗಳು, ರೆಸಾರ್ಟುಗಳು, ಅಣೆಕಟ್ಟು ಮತ್ತು ಮೇಲ್ಸೇತುವೆಗಳ ನಿರ್ಮಾಣಕ್ಕಾಗಿ ಸಾವಿರಾರು ಎಕರೆ ಅರಣ್ಯ ನಾಶ ಮಾಡಿ ಪ್ರಾಕೃತಿಕ ಸಮತೋಲನವನ್ನು ಹಾಳುಮಾಡಲಾಗಿದೆ. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾಂಟ್ರ್ಯಾಕ್ಟರ್ಗಳ ತ್ರಿಕೂಟದಲ್ಲಿ ಸಿಲುಕಿ ಪಶ್ಚಿಮ ಘಟ್ಟಗಳು ನಲುಗುತ್ತಿವೆ. ಇವುಗಳ ರಕ್ಷಣೆಗಾಗಿ ಪಶ್ಚಿಮಘಟ್ಟದ ಶೇಕಡಾ 70ರಷ್ಟು ಭಾಗವನ್ನು ಸೂಕ್ಷ್ಮಪ್ರದೇಶವೆಂದು ಗುರುತಿಸಿ ಅಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಬಾರದೆಂದು, ಉಳಿದ ಪ್ರದೇಶದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಮೊದಲು ಅತ್ಯಂತ ಪ್ರಜಾತಾಂತ್ರಿಕವಾಗಿ ಸ್ಥಳೀಯವಾಸಿಗಳ, ಸ್ಥಳೀಯ ಪಂಚಾಯಿತಿಗಳ ಅಭಿಪ್ರಾಯಗಳನ್ನು ಪರಿಗಣಿಸಬೇಕೆಂದು ಶಿಫಾರಸ್ಸು ಮಾಡಿದ್ದ ಮಾಧವ ಗಾಡ್ಗಿಳ್ ವರದಿಯನ್ನು ಮೂಲೆಗುಂಪು ಮಾಡಿ ಉದ್ಯಮಪತಿಗಳಿಗೆ ಅನುಕೂಲವಾಗುವ ವರದಿಯನ್ನು ಜಾರಿಗೊಳಿಸಲು ಸರ್ಕಾರಗಳು ತುದಿಗಾಲಿನಲ್ಲಿ ನಿಂತಿವೆ. ರಾಜ್ಯದ ಜನತೆ, ಜನಪರ ಸಂಘಟನೆಗಳು ಇನ್ನಾದರೂ ಪರಿಸರ ರಕ್ಷಣೆಗೆ ಮುಂದಾಗದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ನಾವು ಬಾರಿ ಅಪಾಯವನ್ನು ತರಲಿದ್ದೇವೆ ಎಂದು ಎಚ್ಚರಿಸಿದರು.
ವಾಷಿಂಗ್ಟನ್ನ ಗೌವರ್ನರ್ ಜೇ ಇನ್ಸ್ಲೀ ಅವರು ಹೇಳಿರುವಂತೆ ‘ಹವಾಮಾನ ವೈಪರೀತ್ಯದ ಬಿಸಿಯನ್ನು ನೋಡುತ್ತಿರುವ ಮೊದಲ ಪೀಳಿಗೆಯು ನಾವಾಗಿದ್ದೇವೆ ಹಾಗೂ ಈ ಕುರಿತು ಏನಾದರೂ ಮಾಡಲು ಸಾಧ್ಯವಿರುವ ಕೊನೆಯ ಪೀಳಿಗೆಯು ನಾವೇ ಆಗಿದ್ದೇವೆ. ಈಗ ನಾವು ಎಚ್ಚರಗೊಳ್ಳದಿದ್ದರೆ ಮುಂದಿನ ಅಪಾಯಗಳನ್ನು ಊಹಿಸಲು ಅಸಾಧ್ಯವಾಗಿದೆ. ಆದ್ದರಿಂದ ಯಾರೋ ನಾಯಕನೊಬ್ಬನ ಬರುವಿಕೆಗಾಗಿ ಕಾಯದೇ ಪ್ರಜ್ಞಾವಂತ, ಪರಿಸರ ಕಾಳಜಿಯುಳ್ಳ ಪ್ರತಿಯೊಬ್ಬರು ಒಬ್ಬ ಉತ್ತಮ, ಪರಿಣಾಮಕಾರಿ ಸಂವಹನಕಾರರಾಗಿ ನಾಡಿನ ಜನತೆಗೆ ಪಶ್ಚಿಮ ಘಟ್ಟಗಳ ರಕ್ಷಣೆಯ ಮಹತ್ವವನ್ನು ತಿಳಿಸಿ, ಸ್ಥಳೀಯ ಜನತೆಯನ್ನು ಸಂಘಟಿಸಿ ಪಶ್ಚಿಮಘಟ್ಟವನ್ನು ರಕ್ಷಿಸುವ ಹೋರಾಟಕ್ಕೆ ಮುನ್ನುಗ್ಗಬೇಕು ಎಂದು ಕರೆ ನೀಡಿದರು.
ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗಬಾಗೇವಾಡಿ ಅವರು ಅಧ್ಯಕ್ಷತೆ ವಹಿಸಿ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆನಂತರ ಪ್ರಶ್ನೋತ್ತರಗಳ ಮೂಲಕ ಸಂವಾದ ನಡೆಯಿತು.