ಜಾನಪದಕ್ಕೆ ಸತ್ವ ತುಂಬಿದ ಸಿಂಪಿ ಲಿಂಗಣ್ಣ
ಇಂಡಿ 11: ಸಿಂಪಿ ಲಿಂಗಣ್ಣನವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸುಮಾರು 35 ವರ್ಷ ಸೇವೆ ಸಲ್ಲಿಸಿ,ಸದಾ ಚಿಂತನಶೀಲತೆ, ಕ್ರಿಯಾಶೀಲತೆಯ ವ್ಯಕ್ತಿತ್ವ,ವೈಚಾರಿಕ ಮನೋಧರ್ಮ ಹೊಂದಿದ್ದ ಅವರು ಆಧುನಿಕ ಸೌಲಭ್ಯಗಳಿಲ್ಲದ ಹಳ್ಳಿಗಳಲ್ಲಿ ಹಳ್ಳಿಗರಾಗಿ ಜನರೊಂದಿಗೆ ಹೊಂದಿಕೊಂಡು ಮಕ್ಕಳಿಗೆ ಜ್ಞಾನ ನೀಡಿದರು. ಶಾಲೆಗಳಲ್ಲಿ ನಾಡಹಬ್ಬ, ಗಣೇಶೋತ್ಸವಗಳನ್ನು ಆಚರಿಸಿ ಪ್ರಸಿದ್ಧ ಸಾಹಿತಿಗಳಿಂದ ಭಾಷಣ ಮಾಡಿಸಿ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಮೂಡಿಸಿದರು ಎಂದು ಬನಹಟ್ಟಿಯಸಾಹಿತಿಗಳಾದ ಬಿ ಆರ್ ಪೋಲೀಸ್ ಪಾಟೀಲ ಹೇಳಿದರು.
ಅವರು ಇಂದು ಇಂಡಿ ಪಟ್ಟಣದ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕೃತಿಕ ಜಗಲಿ ವತಿಯಿಂದ ಜರುಗಿದ "ಶ್ರೀ ಸಿಂಪಿ ಲಿಂಗಣ್ಣ"ಕುರಿತು ಆನ್ ಲೈನ್ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನಪದ ಸಾಹಿತ್ಯ, ಕಾವ್ಯ, ಪ್ರಬಂಧಗಳು, ಜೀವನ ಚರಿತ್ರೆ, ಸಣ್ಣಕಥೆ, ಕಾದಂಬರಿ, ಏಕಾಂಕ ನಾಟಕ, ಮಕ್ಕಳ ಹಾಗೂ ನವ್ಯ ಸಾಕ್ಷರ ಸಾಹಿತ್ಯ, ಅನುವಾದಿತ ಸಾಹಿತ್ಯ, ಅರವಿಂದರ ಸಾಹಿತ್ಯ ಹೀಗೆ ವಿಭಿನ್ನ ನೆಲೆಗಳ ಸಾಹಿತ್ಯದಲ್ಲಿ ಒಂದು ನೂರಕ್ಕೂ ಹೆಚ್ಚಿನ ಕೃತಿಗಳನ್ನು ಲಿಂಗಣ್ಣನವರು ನೀಡಿದ್ದು,ಜಿಲ್ಲೆಯ ಜಾನಪದ ದಿಗ್ಗಜರಾಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ರಾಘವೇಂದ್ರ ಕುಲಕರ್ಣಿ ಮಾತನಾಡಿ,ಸಿಂಪಿ ಲಿಂಗಣ್ಣನವರು ನವೋದಯ ಕಾಲದ ಪ್ರಮುಖ ಸಾಹಿತಿಗಳು ಹಾಗೂ ಜಾನಪದ ತಜ್ಞರು. ಹಳ್ಳಿಯ ಸಮುದಾಯವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಎತ್ತರಿಸಲು ಪ್ರಯತ್ನ ಪಟ್ಟವರು. ಶ್ರೇಷ್ಠ ಶಿಕ್ಷಕರು. ಮಧುರಚನ್ನರ ಒಡನಾಡಿಗಳು ಅರವಿಂದರ ಭಕ್ತರಾದ ಅವರ ಶೈಲಿ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು. ಸಂಶೋಧಕರಾದ ಡಿ ಎನ್ ಅಕ್ಕಿ,ಸುಜಾತಾ ಪೂಜಾರಿ,ಮಹೇಶ ಡೆಂಬ್ರೆ,ವೀರಣ್ಣ ದಸ್ತರೆಡ್ಡಿ,ಬಸವರಾಜ ಗೋರನಾಳ,ಎ ಜಿ ಚೌಧರಿ,ಸಂತೋಷ ಬಂಡೆ,ಶ್ರೀಧರ ಹಿಪ್ಪರಗಿ,ದತ್ತಾತ್ರೇಯ ನಾಯ್ಕೊಡಿ,ಸಂತೋಷ ನೆರಕಿ,ಈರಣ್ಣ ಕಂಬಾರ,ಸುಜಾತಾ ಬೀಳಗಿ,ಬಸವರಾಜ ಕಿರಣಗಿ,ಶ್ರೀಶೈಲ ಜಾಧವ,ರವಿ ಕಪಾಲಿ ಸೇರಿದಂತೆ ಸಾಹಿತಿಗಳು,ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ಸಿ ಎಂ ಬಂಡಗರ ಸ್ವಾಗತಿಸಿದರು, ಗೀತಯೋಗಿ ನಿರೂಪಿಸಿದರು.ವೈ ಜಿ ಬಿರಾದಾರ ವಂದಿಸಿದರು.