ಧಾರವಾಡ - ಹುಬ್ಬಳ್ಳಿ

19ರಂದು ವಲಯ ಮಟ್ಟದ ಯುವಜನರ ಸಂಕಲ್ಪ ಸಮಾವೇಶ

19ರಂದು ವಲಯ ಮಟ್ಟದ ಯುವಜನರ ಸಂಕಲ್ಪ ಸಮಾವೇಶ

ಧಾರವಾಡ 16: ಯುವಜನರಲ್ಲಿ ಉನ್ನತ ನೀತಿ, ನೈತಿಕತೆ, ಜೀವನ ಮೌಲ್ಯಗಳನ್ನು ಬೆಳೆಸುವ ಮೂಲಕ ಮಹಿಳೆಯರ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ವಲಯಮಟ್ಟದ ‘ಮಹಿಳೆಯ ಘನತೆ ಮತ್ತು ಮಾನವ ಮೌಲ್ಯ ಉಳಿಸಲು ಯುವಜನರ ಸಂಕಲ್ಪ ಸಮಾವೇಶ'ವನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ರಾಜ್ಯ ಸಮಿತಿಯಿಂದ ಇದೇ ಸೆಪ್ಟೆಂಬರ್ 19 ರಂದು ಬೆಳಿಗ್ಗೆ 10.30ಕ್ಕೆ ಧಾರವಾಡದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.  

ಪತ್ರಿಕಾಗೋಷ್ಠಿಯಲ್ಲಿ ಎಐಡಿವೈಓ ರಾಜ್ಯಾಧ್ಯಕ್ಷ ಶರಣಪ್ಪ ಉದ್ಭಾಳ ಹಾಗೂ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಅವರು ಜಂಟಿ ಪತ್ರಿಕಾ ಹೇಳಿಕೆ ನೀಡಿದರು. 

ಕರ್ನಾಟಕದ ಮಾಜಿ ಲೋಕಾಯುಕ್ತರು ಹಾಗೂ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಎನ್‌. ಸಂತೋಷ್ ಹೆಗಡೆ ಅವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಎಐಡಿವೈಓ ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ್ ಆಶಯ ನುಡಿಗಳನ್ನಾಡಲಿದ್ದಾರೆ. ಸಮಾವೇಶವು ಇಡೀ ದಿನ ನಡೆಯಲಿದ್ದು, ಉದ್ಘಾಟನೆಯ ನಂತರ ಮೊದಲ ಗೋಷ್ಠಿಯಲ್ಲಿ ‘ಇಂದಿನ ಯುವಮನಸ್ಸಿನ ತಲ್ಲಣಗಳು’ ಈ ವಿಷಯದ ಕುರಿತು ಶಿವಮೊಗ್ಗದ ಹಿರಿಯ ಮನೋಚಿಕಿತ್ಸಕರು ಹಾಗೂ ಆಪ್ತಸಲಹೆಗಾರ ನಡಹಳ್ಳಿ ವಸಂತ್ ಅವರು ಮಾತನಾಡಲಿದ್ದಾರೆ.  

ಮದ್ಯಾಹ್ನ ಎರಡನೇ ಗೋಷ್ಠಿಯಲ್ಲಿ ‘ಲೈಂಗಿಕ ಅಪರಾಧಗಳು- ಕಾರಣಗಳು ಮತ್ತು ಪರಿಹಾರಗಳು’ ವಿಷಯದ ಕುರಿತು ಮಕ್ಕಳ ಹಾಗೂ ಹದಿಹರೆಯದವರ ಮನೋವೈದ್ಯ ಡಾ. ಸುಜ್ಞಾನಿ ದೇವಿ ಪಾಟೀಲ್ ಅವರು ಮಾತನಾಡಲಿದ್ದಾರೆ. ವಿಷಯಗಳ ಮಂಡನೆ ನಂತರ ಸಂವಾದವಿರುತ್ತದೆ. ನಂತರ, ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರರಾದ ರಾಮಾಂಜನಪ್ಪ ಆಲ್ದಳ್ಳಿ ಅವರು ಸಮಾರೋಪ ನುಡಿಗಳನ್ನಾಡಲಿದ್ದಾರೆ. ಎಐಡಿವೈಓ ರಾಜ್ಯಾಧ್ಯಕ್ಷ ಶರಣಪ್ಪ ಉದ್ಭಾಳ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. 

ನಾವಿಂದು ಅತ್ಯಂತ ಕ್ಲಿಷ್ಟಕರ ಸಾಮಾಜಿಕ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ, ಮನಸ್ಸಿಗೆ ತೀವ್ರ ನೋವಾಗುತ್ತದೆ. ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಘಟನೆಗಳು, ಸಣ್ಣಪುಟ್ಟ ಕಾರಣಗಳಿಗೂ ಕೊಲೆ ಮಾಡುತ್ತಿರುವುದನ್ನು ನೋಡಿದಾಗ ನಾವು ಸಭ್ಯ, ನಾಗರಿಕ ಸಮಾಜದಲ್ಲಿದ್ದೇವೆಯೇ ಎಂದೆನಿಸುತ್ತದೆ. ಪ್ರೀತಿ ನಿರಾಕರಿಸಿದ್ದಾಳೆ ಎನ್ನುವ ಕಾರಣಕ್ಕೆ ಹುಬ್ಬಳ್ಳಿಯಲ್ಲಿ 20 ವರ್ಷ ಪ್ರಾಯದ ನೇಹಾ ಹಿರೇಮಠಳನ್ನು ಕಾಲೇಜಿನ ಆವರಣದಲ್ಲಿ ಹಾಡುಹಗಲೇ ಎಲ್ಲರ ಕಣ್ಣೆದುರು ಬರ್ಬರವಾಗಿ ಹತ್ಯೆ ಮಾಡಲಾಯಿತು. ಈ ಘಟನೆಯಿಂದ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಜನರು ಮನೆಯ ಮಗಳನ್ನು ಕಳೆದುಕೊಂಡಂತೆ ತಲ್ಲಣಗೊಂಡರು. ಈ ಆಘಾತಕರ ಘಟನೆಯಿಂದ ಜನರ ಮನಸ್ಸು ಹೊರಬರುವ ಹೊತ್ತಿಗೆ ಒಂದು ತಿಂಗಳ ಒಳಗೆ ಅಂಜಲಿ ಅಂಬಿಗೇರ ಎನ್ನುವ ಹುಡುಗಿಯನ್ನು ಅದೇ ಪ್ರೀತಿ ನಿರಾಕರಣೆಯ ಕಾರಣಕ್ಕೆ ಇನ್ನೊಬ್ಬ ಯುವಕ ಬೆಳಗಿನ ಜಾವ ಆಕೆಯ ಮನೆಗೆ ನುಗ್ಗಿ ಚೂರಿಯಿಂದ ಇರಿದು ಸಾಯಿಸಿದ. ಅಂದರೆ, ಪ್ರೀತಿ ಎಂಬುದು ಪ್ರೀತಿಸಿದಾಕೆಯನ್ನು ಸಾಯಿಸಲು ಪ್ರೇರೇಪಿಸುತ್ತದೆಯೇನು? 

ಈಗ ಕೊಲ್ಕತ್ತಾದ ಆರ್‌.ಜಿ. ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ತರಬೇತಿಯಲ್ಲಿದ್ದ 30 ವರ್ಷದ ಯುವವೈದ್ಯೆಯ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆ, ಬಂಗಾಳದ ಜನರನ್ನು ಬಡಿದೆಬ್ಬಿಸಿದೆ. ಹೆಣ್ಣುಮಕ್ಕಳಿಗೆ ಸುರಕ್ಷಿತ ತಾಣಗಳು ಎಲ್ಲಿ ಉಳಿದುಕೊಂಡಿವೆ? ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಕೆಲಸ ಮಾಡುವ ಎಲ್ಲಾ ಜಾಗಗಳು, ಆಸ್ಪತ್ರೆಗಳು, ಪ್ರಯಾಣ ಮಾಡುವ ಎಲ್ಲ ವಾಹನಗಳು, ಕಾನೂನು ರೂಪಿಸುವ ರಾಜಕಾರಣಿಗಳ ಮನೆಗಳು ಮತ್ತು ಕಾನೂನು ಜಾರಿಗೊಳಿಸುವ ಅಧಿಕಾರಿಗಳ ವಾಸಸ್ಥಳಗಳು, ನ್ಯಾಯದಾನ ಮಾಡುವ ನ್ಯಾಯಾಧೀಶರ ಕೊಠಡಿಗಳು, ಕೊನೆಗೆ ನೆಮ್ಮದಿ ಅರಸಿ ಹೋಗುತ್ತಿದ್ದ ಮಠಮಾನ್ಯಗಳು ಸಹ ಹೆಣ್ಣುಮಕ್ಕಳ ಪಾಲಿಗೆ ಲೈಂಗಿಕ ದೌರ್ಜನ್ಯ-ಅತ್ಯಾಚಾರದ ಭೀತಿ ಹುಟ್ಟಿಸುವ ತಾಣಗಳಾಗಿವೆ. ಇದು 21ನೇ ಶತಮಾನದ ನಾಗರಿಕ ಸಮಾಜದ ಅನಾಗರಿಕ ನಡವಳಿಕೆಗೆ ಸಾಕ್ಷಿಯಾಗಿದೆ. ಮನುಷ್ಯರೆನಿಸಿಕೊಂಡಿರುವವರಲ್ಲಿ ಮನಃಸಾಕ್ಷಿಯನ್ನು ಪುನರಾವಲೋಕನ ಮಾಡಿಕೊಳ್ಳುವ ಸಂದರ್ಭ ಎದುರಾಗಿದೆ. 

ಈ ನಡುವೆ ಪಕ್ಕದ ಕೇರಳ ರಾಜ್ಯದಲ್ಲಿ ನ್ಯಾಯಾಧೀಶೆ ಹೇಮಾ ಸಮಿತಿ ವರದಿ ಬಹಿರಂಗಗೊಂಡಿದ್ದು, ಕೇರಳದ ಸಿನಿಮಾರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ಬಯಲಿಗೆಳೆದಿದೆ. ನಿರ್ದೇಶಕರು, ನಿರ್ಮಾಪಕರು, ನಾಯಕ ನಟರ ಕಾಮ ಚೇಷ್ಟೆಗಳನ್ನು ಪೂರೈಸಲು ಆಗದೇ ಇರುವವರು ಸಿನಿಮಾ ಕ್ಷೇತ್ರ ಪ್ರವೇಶ ಮಾಡಲು ಅಸಾಧ್ಯ ಎನ್ನುವಂತ ಸ್ಥಿತಿ ಇದೆ ಎನ್ನುವ ವಸ್ತುನಿಷ್ಠ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಕರ್ನಾಟಕ ಅಥವಾ ದೇಶದ ಯಾವುದೇ ಭಾಗದ ಸಿನಿಮಾ ಕ್ಷೇತ್ರವು ಹೊರತಾಗಿಲ್ಲ! 

ಇತ್ತೀಚಿನ ವರದಿಗಳು ಹೇಳುವಂತೆ ದೇಶದಲ್ಲಿ 16 ನಿಮಿಷಕ್ಕೆ ಒಂದು ಅತ್ಯಾಚಾರದ ಘಟನೆಗಳು ಸಂಭವಿಸುತ್ತಿವೆ. ನಮ್ಮ ಸಮಾಜದ ಹಲವು ಕಟ್ಟುಪಾಡುಗಳಿಂದಾಗಿ ವರದಿಯಾಗದೆ ಇರುವ ಘಟನೆಗಳು ಇದರ ಮೂರು ಪಟ್ಟು ಹೆಚ್ಚು ಇರಬಹುದೆಂದು ತಜ್ಞರು ಅಂದಾಜಿಸಿದ್ದಾರೆ. ಬೆಂಗಳೂರಿನಲ್ಲಿ ಕಳೆದ 11 ವರ್ಷಗಳಲ್ಲಿ 1322 ಅತ್ಯಾಚಾರಗಳ ಪ್ರಕರಣಗಳಾಗಿದ್ದರೆ, ಅದರಲ್ಲಿ ಕೇವಲ ಹತ್ತು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಕರ್ನಾಟಕದಲ್ಲಿ ಕಳೆದ 7 ತಿಂಗಳಲ್ಲಿ 340 ಅತ್ಯಾಚಾರ ಪ್ರಕರಣಗಳು, 2,089 ಪೋಕೋ ಪ್ರಕರಣಗಳು, 3,643 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. 

ಈ ಹಿನ್ನಲೆಯಲ್ಲಿ ಯುವಜನರಲ್ಲಿ ಉನ್ನತ ನೀತಿ, ನೈತಿಕತೆ, ಜೀವನ ಮೌಲ್ಯಗಳನ್ನು ಬೆಳೆಸುವ ಮೂಲಕ ಮಹಿಳೆಯರ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ‘ಮಹಿಳೆಯ ಘನತೆ ಮತ್ತು ಮಾನವ ಮೌಲ್ಯ ಉಳಿಸಲು ಯುವಜನರ ಸಂಕಲ್ಪ ಸಮಾವೇಶ' ವನ್ನು ಸೆಪ್ಟೆಂಬರ್ 19ರಂದು ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದೆ. ಹೊಸ ಆದರ್ಶ ಮತ್ತು ಉದಾತ್ತ ಧೈಯಕ್ಕಾಗಿ ತುಡಿತ ಇರುವ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಯುವಜನರು ಈ ಸಮಾವೇಶದಲ್ಲಿ ಭಾಗವಹಿಸಿ ಹೊಸ ಸಾಂಸ್ಕೃತಿಕ ಆಂದೋಲನಕ್ಕೆ ಕೈ ಜೋಡಿಸಲಿದ್ದಾರೆ. ಈ ಸಮಾವೇಶದಲ್ಲಿ ಭಾಗವಹಿಸುವವರು 9480954499, 9066919505 ಗೆ ಸಂಪರ್ಕಿಸಲು ಮನವಿ. 

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಭವಾನಿಶಂಕರ್, ಜಿಲ್ಲಾ ಕಾರ್ಯದರ್ಶಿ ರಣಜಿತ್ ದೂಪದ್ ಉಪಸ್ಥಿತರಿದ್ದರು. 


ಸುದ್ದಿ ಓದಿ